ಕನಕಪುರ: ನಮ್ಮ ಮೇಲೆ ಆಧಾರರಹಿತ ಆರೋಪಗಳನ್ನು ಮಾಡುತ್ತಿರುವ ಮೈತ್ರಿ ಪಕ್ಷದ ಮುಖಂಡರು ಹಾಸನದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಮೊದಲು ಮಾಹಿತಿ ನೀಡಿ ನಂತರ ನಮ್ಮ ಮೇಲೆ ಆರೋಪ ಮಾಡಲಿ ಎಂದು ಸಂಸದ ಡಿ.ಕೆ.ಸುರೇಶ್ ಸವಾಲು ಎಸೆದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾಲ್ಲೂಕಿನ ದೊಡ್ಡ ಆಲಹಳ್ಳಿಯ ಮತಗಟ್ಟೆ ಸಂಖ್ಯೆ 245 ರಲ್ಲಿ ಮತದಾನ ಮಾಡಿದ ನಂತರ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು ಕಳೆದ ಎರಡು ದಿನಗಳಿಂದ ಹಾಸನದಲ್ಲಿ ಸಾಮಾಜಿಕ ಜಾಲತಾಣ ಗಳಲ್ಲಿ ಹಾಗೂ ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ದೊಡ್ಡವರು ಎನ್ನುವ ಕುಟುಂಬದ ಅಶ್ಲೀಲ ದೃಶ್ಯಗಳು ಹರಿದಾಡುತ್ತಿರುವುದು ನಾಚಿಕೆ ಗೇಡಿನ ಸಂಗತಿ ಯಾಗಿದ್ದು ಅವರಿಗೆ ಗೌರವ ಇದ್ದರೆ ಚುನವಣಾ ಕಣದಿಂದ ಹಿಂದೆ ಸರಿಯುವಂತೆ ತಿಳಿಸಿ ತೀವ್ರ ವಾಗ್ದಾಳಿ ನಡೆಸಿದರು.
ಮತದಾನ ಪ್ರಕ್ರಿಯೆ ಆರಂಭದ ದಿನದಿಂದಲೂ ಒಂದಲ್ಲಾ ಒಂದು ಆರೋಪ ಮಾಡುತ್ತಿರುವ ವಿರೋಧಿಗಳಿಗೆ ತಿರುಗೇಟು ನೀಡಿ ನಮ್ಮ ಮೇಲೆ ಗ್ಯಾರಂಟಿ ಹಾಗೂ ಕೂಪನ್ ಕಾರ್ಡ್ ಗಳ ಹಂಚಿಕೆ ಆರೋಪವನ್ನು ಮಾಡುತ್ತಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಮೈತ್ರಿ ಅಭ್ಯರ್ಥಿಯು ಸಹ ಕೂಪನ್ ಗಳನ್ನು ಹಂಚಿರುವುದು ನಮ್ಮ ಬಳಿಯೂ ಇದೆ ಎಂದು ತಮ್ಮ ಬಳಿಯಿದ್ದ ಕೂಪನ್ ಕಾರ್ಡ್ ನ್ನು ಪ್ರದರ್ಶಿಸಿದರು.
ಕ್ಷೇತ್ರದಲ್ಲಿ ಶಾಂತಿಯುತವಾಗಿ ಮತದಾನ ನಡೆಯುತ್ತಿದ್ದು ಗ್ರಾಮಾಂತರದಲ್ಲಿ ಬಹಳ ಉತ್ಸಾಹದಿಂದ ಮತದಾನ ವಾಗಿದ್ದು ನಗರ ಪ್ರದೇಶದಲ್ಲಿ ಶೇಕಡ ಮತದಾನ ಕಡಿಮೆ ಎನಿಸುತ್ತದೆ, ನಮ್ಮ ಹಕ್ಕು ನಮ್ಮ ನೀರು, ನಮ್ಮ ತೆರಿಗೆಗಳ ಬಗ್ಗೆ ಸಾಕಷ್ಟು ಜನಪರ ಹೋರಾಟ ಮಾಡಿದ್ದರೂ ಸಹ ಜಾಣ ಕಿವುಡು ಪ್ರದರ್ಶಿಸಿದೆ ಇದಕ್ಕೆ ಉತ್ತರ ನೀಡಬೇಕಾ ದವರೂ ನಿತ್ಯ ಐಟಿ ದಾಳಿ ಮಾಡಿಸುತ್ತಾ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಆರೋಪಿಸಿದರು.
ಇದು ನನ್ನ ನಾಲ್ಕನೇ ಸ್ಪರ್ಧೆಯಾಗಿದ್ದು ನನ್ನ ಗೆಲವು ಹೆಚ್ಚಿನ ವಿಶ್ವಾಸವನ್ನು ತಂದಿದ್ದು ನನ್ನ ಕ್ಷೇತ್ರದ ಅಭಿವೃದ್ಧಿ ಜೊತೆಗೆ ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಗಳು ಈ ಬಾರಿ ನಮ್ಮ ಕೈ ಹಿಡಿಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.