ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದ್ದು ಈ ಚುನಾವ ಣೆಯಲ್ಲಿ ಕ್ಷೇತ್ರದಲ್ಲಿ ಶೇ.90 ಕ್ಕಿಂತಲೂ ಹೆಚ್ಚು ಮತದಾನ ವಾಗಬೇಕೆಂಬ ಗುರಿ ಹೊಂದಿ ಇದನ್ನು ತಲುಪಲು ಮತದಾರರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ ತಿಳಿಸಿದರು.
ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಭಾವಸಾರ ವಿಷನ್ ಇಂಡಿಯಾ ವತಿಯಿಂದ ದಾವಣಗೆರೆ ನಗರದ ಜಯದೇವ ವೃತ್ತದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಮತದಾನ ಜಾಗೃತಿ ಅಂಗವಾಗಿ ಏರ್ಪಡಿಸಲಾದ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ದೇಶವನ್ನು ಬದಲಾಯಿಸುವ ಶಕ್ತಿ ಮತದಾರರಲ್ಲಿದ್ದು, ಮತದಾರರು ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ತಮ್ಮ ಸ್ಪಷ್ಟ ಅಭಿಪ್ರಾಯವನ್ನು ವ್ಯಕ್ತಪಡಿಸಬೇಕು.
ಚುನಾವಣೆಯಲ್ಲಿ ಎಲ್ಲಾ ಮತದಾರರು ಮತ ಚಲಾಯಿಸಿದಲ್ಲಿ ಉತ್ತಮ ನಾಯಕರನ್ನು ಆಯ್ಕೆ ಮಾಡಲು ಸಹಕಾರಿಯಾಗಲಿದೆ ಎಂದರು.ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್, ಬಿಸಿಎಂ ಅಧಿಕಾರಿ ಗಾಯತ್ರಿ, ವಿವಿಧ ಇಲಾಖೆಯ ವಾರ್ಡ್ನ್ಗಳು, ಭಾವಸಾರ ಮಿಷನ್ ಇಂಡಿಯಾ ಅಧ್ಯಕ್ಷರಾದ ಸರಳ ಆಮ್ಟೆ, ಕಾರ್ಯದರ್ಶಿ ರಮೇಶ್ ಗುಜ್ಜಾರ್, ಉಪಾಧ್ಯಕ್ಷ ಅಶೋಕ್ ನವಾಲೆ, ರಮೇಶ್ ಅಂಬರ್ಕರ್, ಅರುಣ್ ಗುಜ್ಜಾರ್, ನಿಂಗೋಜಿರಾವ್ ಗುಜ್ಜಾರ್, ಆರ್ಥಿ ಗುಜ್ಜಾರ್, ರಮೇಶ್ ತೇಲ್ಕರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.ಮತದಾನ ಜಾಗೃತಿ ಜಾಥವು ದಾವಣಗೆರೆ ನಗರದ ಜಯದೇವ ವೃತ್ತದಿಂದ ಪ್ರಾರಂಭವಾಗಿ ಅಂಬೇಡ್ಕರ್ ಸರ್ಕಲ್ ಮೂಲಕ ವಿದ್ಯಾರ್ಥಿ ಭವನ ಮಾರ್ಗವಾಗಿ ತೆರಳಿ ಗುಂಡಿಸರ್ಕಲ್ ತಲುಪಿತು.