ದಾವಣಗೆರೆ: ಮಕ್ಕಳು ವಿದ್ಯಾವಂತರಾಗಿ ಶಿಕ್ಷಣದ ಮೂಲಕ ದೇಶದ ಭವಿಷ್ಯವನ್ನು ರೂಪಿಸಬೇಕು ಎಂದು ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಮಲ್ಲನಾಯ್ಕ್ ತಿಳಿಸಿದರು.ಶುಕ್ರವಾರ ರಾಜ್ಯ ಬಾಲಭವನ ಸೊಸೈಟಿ ಬೆಂಗಳೂರು, ಜಿಲ್ಲಾ ಬಾಲಭವನ ಸಮಿತಿ (ರಿ) ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಜೆ.ಹೆಚ್ ಪಟೇಲ್ ಬಡಾವಣೆಯ ಬಾಲಭವನದಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ದಿನಾಚರಣೆಯು ಪ್ರತಿ ಮಗುವಿನ ವಿಶಿಷ್ಟ ಅಗತ್ಯತೆಗಳು ಮತ್ತು ಪ್ರತಿಭೆಗಳನ್ನು ಗುರುತಿಸುವ ಒಂದು ವಿಶೇಷ ಕಾರ್ಯಕ್ರಮವಾಗಿದ್ದು, ದೇಶದ ಭವಿಷ್ಯವನ್ನು ರೂಪಿಸಲು ಮಕ್ಕಳು ಉನ್ನತ ವ್ಯಾಸಂಗ ಪಡೆದು ಉತ್ತಮ ಪ್ರಜೆಗಳಾಗಬೇಕು ಎಂದರು.
ನಗರದಲ್ಲಿ ಬಾಲಭವನ ನಿರ್ಮಾಣವಾಗಿ ಐದು ವರ್ಷ ಕಳೆದರೂ ಯಾವುದೇ ಕಾರ್ಯಕ್ರಮ ನಡೆದಿಲ್ಲ,
ಈ ದಿನ ವಿಶೇಷವಾಗಿ ಮುದ್ದು ಮಕ್ಕಳ ದಿನಾಚರಣೆಯನ್ನು ಆಚರಿಸುತ್ತಿರುವುದು ಎಲ್ಲಾರ ಮೊಗದಲ್ಲಿ ಸಂತಸ ತಂದಿದೆ. ಮಕ್ಕಳಲ್ಲಿರುವ ಸೃಜನಶೀಲತೆಯನ್ನು ತೋರ್ಪಡಿಸುವತಂಹ ವಿಶೇಷ ಕಾರ್ಯಕ್ರಮ ಇದಾಗಿದೆ ಎಂದರು.ನೃತ್ಯ ಪ್ರದರ್ಶನ: ವಿವಿಧ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ, ಗಾಯನ ಹಾಗೂ ಮುಂತಾದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.
ಜಿಲ್ಲಾ ಬಾಲಭವನದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು ವಿಜೇತರಿಗೆ ಪ್ರಮಾಣ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು.ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಕೊಟ್ರೇಶ್ ಜಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ವಾಸಂತಿ ಉಪ್ಪಾರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಜಿಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಭಿಕುಮಾರ್ ಉಪಸ್ಥಿತರಿದ್ದರು.