ಬೆಂಗಳೂರು: ಬಳ್ಳಾರಿ ರಸ್ತೆಯ ಬಾಗಲೂರು ಕ್ರಾಸ್ ಸಮೀಪ ಕೊಲೆಯಾದ ಸ್ಥಿತಿಯಲ್ಲಿ ಕಾರಿನಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ಹಂತಕರು ವ್ಯಕ್ತಿಯನ್ನು ಕೊಲೆಗೈದು ಕಾರಿನಲ್ಲಿ ಶವ ಬಿಟ್ಟು ಪರಾರಿ ಆಗಿರುವ ಸಾಧ್ಯತೆ ಇದೆ.
ರಸ್ತೆ ಬದಿ ನಿಂತಿದ್ದ ಬಿಳಿ ಬಣ್ಣದ ಸ್ವಿಟ್ಪ್ ಕಾರಿನಲ್ಲಿ ಶವ ಕಂಡು ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಯಲಹಂಕ ಠಾಣೆ ಪೊಲೀಸರು ಪರಿಶೀಲಿಸಿದ್ದಾರೆ. ಕೃಷ್ಣ ಯಾದವ್ ಕೊಲೆಯಾದವರು ಎಂದು ತಿಳಿದು ಬಂದಿದೆ.
ರಿಯಲ್ಎಸ್ಟೇಟ್ ಉದ್ಯಮಿಯಾಗಿದ್ದ ಕೃಷ್ಣ ಯಾದವ್, ಮನೆಯಿಂದ ಕೆಲಸಕ್ಕೆಂದು ಹೊರ ಹೋಗಿದ್ದರು.
ಆದರೆ ವಾಪಸ್ ಆಗಿರಲಿಲ್ಲ ಎನ್ನಲಾಗಿದೆ. ನಿನ್ನೆ ರಾತ್ರಿಯಿಂದ ಕಾಣೆಯಾಗಿದ್ದ ಕೃಷ್ಣ ಈಗ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೃಷ್ಣ ಯಾದವ್ ಕೋಗಿಲುವಿನ ವೆಂಕಟಾಲ ಬಳಿ ಕಛೇರಿವೊಂದನ್ನು ತೆರೆದಿದ್ದರು. ಹಲವು ವರ್ಷಗಳಿಂದ ಯಲಹಂಕದಲ್ಲೇ ಕೃಷ್ಣ ಯಾದವ್ ಕುಟುಂಬಸ್ಥರು ನೆಲೆಸಿದ್ದರು. ಆಫೀಸ್ ಮಿಟಿಂಗ್ ಎಂದು ಮನೆ ಬಿಟ್ಟಿದ್ದ ಕೃಷ್ಣ ಯಾದವ್ ಕೊಲೆಯಾಗಿದ್ದಾರೆ.
ಶವದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿದ್ದು, ಕಾರಲ್ಲಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳದ ಸುತ್ತಮುತ್ತ ಇರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದು, ಹಂತಕರಿಗಾಗಿ ಹುಡಕಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.