ಕಲಬುರಗಿ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಾ. ಸಿ.ಎನ್. ಮಂಜುನಾಥ್ ಅವರು, ಸ್ಪರ್ಧೆ ಮಾಡಿದರೆ ನಮಗೇನು ಬೇಸರವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಜಯದೇವ ಹೃದ್ರೋಗ ಸಂಸ್ಥೆಯ ನಿವೃತ್ತ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಸ್ಪರ್ಧಿಸುತ್ತಾರೆ ಎಂದು ಕೇಳಿ ಬರುತ್ತಿರುವ ಮಾತುಗಳಿಗೆ ಪ್ರತಿಕ್ರಿಯಿಸಿರುವ ಅವರು, ಡಾ.ಮಂಜುನಾಥ್ ಅವರ ಬಗ್ಗೆ ನನಗೆ ಗೌರವವಿದೆ. ಗ್ರಾಮಾಂತರ ಕ್ಷೇತ್ರದಿಂದ ಯಾರೇ ಸ್ಪರ್ಧಿಸಿದರು ನಮ್ಮ ಅಭ್ಯಂತರವಿಲ್ಲ ಎಂದಿರುವ ಅವರು, ಡಿ.ಕೆ.ಸುರೇಶ್ ಕೇವಲ ಸಂಸದರಲ್ಲ. ಅವರು ಪಂಚಾಯಿತಿ ಮೆಂಬರ್ ಕೂಡ ಎಂದಿದ್ದಾರೆ.
ಸುರೇಶ್ ಅವರು, ಪಂಚಾಯಿತಿ ಮೆಂಬರ್ ರೀತಿಯಲ್ಲಿ ಕೆಲಸ ಮಾಡುತ್ತಾರೆ ಎಂದಿರುವ ಅವರು, ನಾವು ಹೆಚ್.ಡಿ.ದೇವೇಗೌಡ, ಹೆಚ್.ಡಿ.ಕುಮಾರಸ್ವಾಮಿ ವಿರುದ್ಧವೂ ಗೆಲುವು ಸಾಧಿಸಿದ್ದೇವೆ. ಮೊಮ್ಮಗನ ಎಲೆಕ್ಷನ್, ತಾತನ ಚುನಾವಣೆಯನ್ನು ನೋಡಿದ್ದೇವೆ. ಯಾರೇ ಸ್ಪರ್ಧೆ ಮಾಡಿದರೂ ನಮಗೇನು ಬೇಸರವಿಲ್ಲ ಎಂದಿದ್ದಾರೆ.
ಈ ಬಾರಿ ಬಿಜೆಪಿಗೆ ಆಡಳಿತ ವಿರೋಧಿ ಅಲೆ ಕಾಣುತ್ತಿದೆ. ಹಾಗಾಗಿ 10 ಸಂಸದರನ್ನು ಬದಲಾವಣೆ ಮಾಡಲು ಮುಂದಾಗಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 20 ಸ್ಥಾನಗಳಲ್ಲಿ ಗೆಲವು ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಅನೇಕ ಜನ ಪಕ್ಷ ಸೇರ್ಪಡೆ ವಿಚಾರವಾಗಿ ನಮ್ಮನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ನಿನ್ನೆ ಜಯಪ್ರಕಾಶ್ ಹೆಗ್ಡೆ, ಎಂಪಿಕೆ ನಮ್ಮ ಪಕ್ಷ ಸೇರಿದ್ದಾರೆ. ಇನ್ನೂ ಬಹಳ ಜನ ಪಕ್ಷಕ್ಕೆ ಬರುವವರಿದ್ದಾರೆ. ಅದರಲ್ಲಿ ಹಾಲಿ ಬಿಜೆಪಿ ಎಂಪಿಗಳು ಕೂಡ ಇದ್ದಾರೆ. ಈಗ ಅವರ ಹೆಸರು ಬಹಿರಂಗ ಪಡಿಸುವುದಿಲ್ಲ ಎಂದು ಹೇಳಿದ್ದಾರೆ.ಸದಾನಂದ ಗೌಡರನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದ್ದೀರಾ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ಅವರು ಪಕ್ಷಕ್ಕೆ ಬಂದರೆ ಸ್ವಾಗತ ಎಂದು ಹೇಳಿದ್ದಾರೆ.
ಕಾಂಗ್ರೆಸ್ಅಭ್ಯರ್ಥಿಗಳ ಎರಡನೇ ಪಟ್ಟಿ 15 ಕ್ಕೆ ಬಿಡುಗಡೆಯಾಗಲಿದೆ. ದೆಹಲಿಯಲ್ಲಿ ಚುನಾವಣಾ ಸಮಿತಿ ಸಭೆಯ ಬಳಿಕ ಪಟ್ಟಿ ಬಿಡುಗಡೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.