ಶಿಡ್ಲಘಟ್ಟ: ಪೌರಕಾರ್ಮಿಕರಿಗೆ ಉತ್ತಮ ಆಹಾರ ನೀಡುತ್ತಿಲ್ಲ ಎಂದು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲೇ ಹೇಳಿಕೆನೀಡಿದ ಹಿನ್ನೆಲೆಯಲ್ಲಿ ನಗರಸಭೆ ಆಯುಕ್ತರು ಇಂದು ಜಿಲ್ಲಾ ಸಫಾಯಿ ಕರ್ಮಚಾರಿ ಸಮಿತಿ ಸದಸ್ಯರೊಂದಿಗೆ ಪೌರಕಾರ್ಮಿಕರಿಗೆ ಆಹಾರ ಜೊತೆಗೆ ಮೊಟ್ಟೆ ನೀಡಿ ನಿರಂತರವಾಗಿ “ನಿಮ್ಮೊಂದಿಗೆ ನಾವಿದ್ದೇವೆ” ನೀಡಿದರು.
ಇತ್ತೀಚಿಗೆ ಶಿಡ್ಲಘಟ್ಟ ನಗರಕ್ಕೆ ಜಿಲ್ಲಾಧಿಕಾರಿಗಳಾದ ಡಾ:ಪಿ. ಎನ್. ರವೀಂದ್ರ ಅವರು ಭೇಟಿ ನೀಡಿದಾಗ ಪೌರಕಾರ್ಮಿಕರಿಗೆ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ಸಭೆಯಲ್ಲಿ ಅಳಲು ತೋಡಿಕೊಂಡಿದ್ದರು. ಇದಾದ ನಂತರ ಜಿಲ್ಲಾ ಸಫಾಯಿ ಕರ್ಮಚಾರಿ ಪುನರ್ವಸತಿ ಸಮಿತಿ ಸದಸ್ಯರು ನಗರಸಭೆ ಆಯುಕ್ತರೊಂದಿಗೆ ಮಾತನಾಡಿ, ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ನಗರಸಭೆ ಆಯುಕ್ತರು ಮತ್ತು ಪೌರಕಾರ್ಮಿಕರ ರಾಜ್ಯ ಕಾರ್ಯಧ್ಯಕ್ಷರಾದ ಮುರಳಿ ಅವರು ಪೌರಕಾರ್ಮಿಕರ ಸಭೆ ಸೇರಿಸಿ ಆಹಾರ ನೀಡುವ ಗುತ್ತಿಗೆದಾರರೊಂದಿಗೆ ಮಾತನಾಡಿದ್ದರು.
ಇಂದು ಜಿಲ್ಲಾ ಸಫಾಯಿ ಕರ್ಮಚಾರಿ ಪುನರ್ವಸತಿ ಸಮಿತಿ ಸದಸ್ಯ ಸಿ ವಿ ಲಕ್ಷ್ಮಣರಾಜು ಪೌರಕಾರ್ಮಿಕರೊಂದಿಗೆ ಮಾತನಾಡಿದರು. ಅವರಿಗೆ ನೀಡಿದ್ದ ಆಹಾರದ ಗುಣಮಟ್ಟ ಪರಿಶೀಲಿಸಿ ಆಯುಕ್ತರೊಂದಿಗೆ ಮಾತನಾಡಿ ಕಳೆದ ಜಿಲ್ಲಾ ಸಫಾಯಿ ಕರ್ಮಚಾರಿ ಪುನರ್ವಸತಿ ಸಮಿತಿಯಲ್ಲಿ ಜಿಲ್ಲಾಧಿಕಾರಿಗಳು ಸೂಚಿಸಿದಂತೆ ಉತ್ತಮ ಆಹಾರ ಮತ್ತು ಸೌಲಭ್ಯಗಳನ್ನು ಕಲ್ಪಿಸಿ ಕೊಡುವಂತೆ ಸೂಚಿಸಿದರು.
ಪೌರಕಾರ್ಮಿಕರೊಂದಿಗೆ ಮಾತನಾಡಿ ನೀವು ಕಷ್ಟಪಟ್ಟು ಮುಂಜಾನೆ ನಗರವನ್ನು ಸ್ವಚ್ಛ ಮಾಡುತ್ತಾ ಜನರ ಆರೋಗ್ಯವನ್ನು ಕಾಪಾಡುತ್ತೀರಿ. ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಮತ್ತು ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ತಿಳುವಳಿಕೆ ನೀಡಿದರು.