ದೊಡ್ಡಬಳ್ಳಾಪುರ: ಕಳೆದೊಂದು ವಾರದಿಂದ ಸುರಿಯುತ್ತೀರುವ ಮಳೆಯಿಂದ ರೈತರು ಸಂತೋಷದ ಜೋತೆಗೆ ಅಲ್ಲಲ್ಲಿ ತೊಂದರೆ ಹಾಗೂ ನಷ್ಟ ಅನುಭವಿಸವಂತಾಗಿದೆ.ತಾಲೂಕಿನ ಘಾಟಿ ರಸ್ತೆಯ ತಿರುಮಗೊಂಡನಹಳ್ಳಿ ಬಳಿ ರಸ್ತೆಗೆ ಅಡ್ಡಲಾಗಿ ಬಿದ್ದ ವಿದ್ಯುತ್ ಕಂಬ, ಕ್ಷಣಾರ್ಧದಲ್ಲಿ ಬಚಾವ್ ಆದ ಬಿಎಂಟಿಸಿ ಬಸ್ ಸ್ಥಳಕ್ಕೆ ಬೆಸ್ಕಾಂ ಸಿಬ್ಬಂದಿ ಭೇಟಿ, ತೆರವು ಕಾರ್ಯಕ್ಕೆ ಮುಂದಾದ ಸಿಬ್ಬಂದಿ.
ಮಂಗಳವಾರ ಸಂಜೆ ತಾಲೂಕಿನ ಹಲವೆಡೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ಬಿರುಗಾಳಿ ಸಹಿತ ಸುರಿದ ಮಳೆಯಿಂದಾಗಿ ಅಲ್ಲಲ್ಲಿ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿರುವ ಘಟನೆಗಳು ನಡೆದಿವೆ.ಘಾಟಿ ಸುಬ್ರಹ್ಮಣ್ಯ ದೇವಾಲಯ ರಸ್ತೆಯ ತಿರುಮಗೊಂಡನಹಳ್ಳಿ ಸಮೀಪ ಮರವೊಂದು ವಿದ್ಯುತ್ ಲೈನ್ ಮೇಲೆ ಬಿದ್ದ ಪರಿಣಾಮ ಎರಡು ವಿದ್ಯುತ್ ಕಂಬಗಳು ರಸ್ತೆಗೆ ಅಡ್ಡಲಾಗಿ ಉರುಳಿಬಿದ್ದಿದ್ದು, ವಾಹನ ಸವಾರರು ಪರದಾಡುವಂತಾಗಿತ್ತು.
ಸ್ವಲ್ಪದರಲ್ಲಿ ಬಿಎಂಟಿಸಿ ಬಸ್ ಬಚಾವ್ ಆಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ವಿದ್ಯುತ್ ಕಂಬಗಳು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ಕೆಲಕಾಲ ಮಳೆಯಲ್ಲೇ ವಾಹನ ಸವಾರರು ನಿಂತಿದ್ದರು.ಮಾಹಿತಿ ಪಡೆದ ಬೆಸ್ಕಾಂ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿ ಕಂಬಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.