ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತೆರಿಗೆ ಹೆಚ್ಚಳ ಮಾಡಿರುವುದನ್ನು ಖಂಡಿಸಿ ರಾಜ್ಯ ಬಿಜೆಪಿ ಘಟಕದ ವತಿಯಿಂದ ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಗೂ ಮುನ್ನಾ ಆನಂದರಾವ್ ವೃತ್ತದಿಂದ ಸ್ವಾತಂತ್ರ್ಯ ಉದ್ಯಾನವನದವರೆಗೂ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಇದೊಂದು ಜನವಿರೋಧಿ ನಿರ್ಧಾರ ಎಂದು ತೀವ್ರವಾಗಿ ಖಂಡಿಸಿ ಮಾತನಡಿದರು.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದಾಗಿ ಬಡ, ಮಧ್ಯಮ ವರ್ಗದವರೆಗೆ ಸಾಕಷ್ಟು ಹೊರೆಯಾಗಲಿದೆ. ಇದರಿಂದಾಗಿ ಸಾಮಾನ್ಯ ಜನರಿಗೆ ಅನಾನುಕೂಲವಾಗಲಿದೆ. ಆಡಳಿತ ನಿರ್ವಹಿಸುವಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ವಿಫಲರಾಗಿದ್ದಾರೆ ಎಂದು ದೂರಿದ್ದಾರೆ.ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ ಈ ಸರ್ಕಾರ ಎಲ್ಲಾ ರೀತಿಯಲ್ಲೂ ವಿಫಲವಾಗಿದೆ. ಈ ಸರ್ಕಾರಕ್ಕೆ ಮಾನಮರ್ಯಾದೆಯಿಲ್ಲ.
ಜನರಿಗೆ ಮೋಸ ಮಾಡುವ ಮೂಲಕ ಗ್ಯಾರಂಟಿಯೋಜನೆಗಳಿಗೆ ಹಣ ಹೊಂದಿಸುತ್ತಿದ್ದಾರೆ. ಕಳೆದ ನಾಲ್ಕೈದು ತಿಂಗಳಿಂದ ಆಡಳಿತ ಕುಸಿದಿದೆ ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.ಬೆಲೆ ಏರಿಕೆ ಮಾಡಿರುವ ಸಿದ್ದರಾಮಯ್ಯಗೆ ನಾಚಿಕೆಯಾಗಬೇಕು. ವಿಧಾನಪರಿಷತ್ನ ಪಕ್ಷದ ಸಚೇತಕ ಎನ್. ರವಿಕುಮಾರ್ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಸೇರಿದಂತೆ ಅನೇಕ ಪ್ರಮುಖ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.