ತಿಪಟೂರು: ಬಿ.ಆರ್.ಸಿ. ಗಂಗಾಧರ್ ರವರ ಅಮಾನತು ಆದೇಶ ಹಿಂಪಡೆಯದಿದ್ದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಿದ್ದೇವೆ ಎಂದು ದಲಿತ ಮುಖಂಡರಾದ ಪೆದ್ದಿಹಳ್ಳಿ ನರಸಿಂಹಯ್ಯ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಿ.ಇ.ಓ.ಕಚೇರಿಯಲ್ಲಿ ಬಿ.ಆರ್.ಸಿ.ಯಾಗಿ ಕಾರ್ಯನಿರ್ವಹಿಸುತ್ತಿದ್ದ ದಲಿತ ನೌಕರ ಗಂಗಾಧರ್ ರವರನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಯ ಹಾಗೂ ಕುಮ್ಮಕ್ಕಿನ ಮೇರೆಗೆ ಒಬ್ಬ ದಲಿತ ಬಿ.ಆರ್.ಸಿ. ಯನ್ನು ಅಮಾನತ್ತು ಗೊಳಿಸಲಾಗಿದೆ. ಈಗಾಗಲೇ ಅಮಾನತ್ತು ಆದೇಶವನ್ನು ಖಂಡಿಸಿ ಹಿಂಪಡೆಯುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಉಪ ವಿಭಾಗಾಧಿಕಾರಿಗಳಿಗೆ ದಿನಾಂಕ 27-05-2024 ರಂದು ಮನವಿ ಸಲ್ಲಿಸಲಾಗಿತ್ತು. ಆದರೆ ಇದುವರೆಗೂ ಬಿ.ಆರ್.ಸಿ. ಗಂಗಾಧರ್ ರವರ ಅಮಾನತ್ತಿನ ಆದೇಶವನ್ನು ಹಿಂಪಡೆದಿರುವುದಿಲ್ಲ.
ತಾಲ್ಲೂಕಿನ ತಡಸೂರು ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ದಲಿತ ವಿರೋಧಿ ದಿನೇಶ್ ರವರ ವಿರುದ್ಧ ತನಿಖೆ ಕೈಗೊಂಡು ಅಮಾನತ್ತು ಮಾಡಲು ಮನವಿ ಸಲ್ಲಿಸಲಾಗಿತ್ತು. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದೇ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ದಲಿತ ವಿರೋಧಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಆದ್ದರಿಂದ ಬಿ.ಆರ್.ಸಿ. ಗಂಗಾಧರ್ ರವರ ಅಮಾನತ್ತು ಆದೇಶ ಹಿಂಪಡೆಯದಿದ್ದರೆ ದಿನಾಂಕ 10-6-2024 ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಮುಂಭಾಗ ದಲಿತ ಪರ ಸಂಘಟನೆಗಳೊಂದಿಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಿದ್ದೇವೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡರಾದ ಪೆದ್ದಿಹಳ್ಳಿ ನರಸಿಂಹಯ್ಯ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕರಾದ ನಾಗತಿಹಳ್ಳಿ ಕೃಷ್ಣಮೂರ್ತಿ, ಸತೀಶ್ ಮತ್ತಿತರರು ಭಾಗವಹಿಸಿದ್ದರು.