ಹೈದರಾಬಾದ್: ಪ್ರೊ ಕಬಡ್ಡಿ 10ನೇ ಆವೃತ್ತಿಯಲ್ಲಿ ಶುಕ್ರವಾರದಿಂದ ಹೈದರಾಬಾದ್ನಲ್ಲಿ ಪಂದ್ಯಗಳು ನಡೆ ಯಲಿವೆ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಮತ್ತು ಇಷ್ಟರವರೆಗೆ ಆಡಿದ 12 ಪಂದ್ಯಗಳಲ್ಲಿ ಕೇವಲ ಒಂದ ರಲ್ಲಿ ಜಯ ಸಾಧಿಸಿರುವ ತೆಲುಗು ಟೈಟಾನ್ಸ್ ಮೊದಲ ಪಂದ್ಯದಲ್ಲಿ ಬೆಂಗ ಳೂರು ಬುಲ್ಸ್ ತಂಡವನ್ನು ಎದುರಿಸಲಿದೆ.
ದಿನದ ಇನ್ನೊಂದು ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ತಂಡವು ಯುಪಿ ಯೋಧಾಸ್ ತಂಡವನ್ನು ಎದುರಿಸಲಿದೆ.ತವರಿನಲ್ಲಿ ನಡೆಯುವ ಕಾರಣ ತೆಲುಗು ಟೈಟಾನ್ಸ್ ಗರಿಷ್ಠ ಪಂದ್ಯ ಗಳಲ್ಲಿ ಜಯ ದಾಖಲಿಸಲು ಪ್ರಯತ್ನಿಸ ಬಹುದಾಗಿದೆ. ಈ ಚರಣದಲ್ಲಿ ತೆಲುಗು ನಾಲ್ಕು ಪಂದ್ಯಗಳನ್ನು ಆಡಲಿದ್ದು ತನ್ನ ಅಂಕಗಳಿಕೆಯನ್ನು ಏರಿಸಲು ಉತ್ತಮ ಅವಕಾಶ ಪಡೆದಿದೆ.
ಇದೇ ವೇಳೆ ಜೈಪುರದಲ್ಲಿ ನಡೆದ ಹೋರಾಟದ ವೇಳೆ ಅಮೋಘ ಪ್ರದರ್ಶನ ನೀಡಿದ ಜೈಪುರ ತಂಡವು ಇದೀಗ ಪುನೇರಿ ಪಲ್ಟಾನ್ಸ್ ತಂಡವನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಎರಡೂ ತಂಡಗಳು ತಲಾ 10 ಪಂದ್ಯಗಳಲ್ಲಿ ಜಯಿಸಿದ್ದರೂ ಜೈಪುರ 58 ಅಂಕ ಗಳಿಸಿದ್ದರೆ ಪುನೇರಿ 52 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ತಲಾ 44 ಅಂಕ ಹೊಂದಿರುವ ದಬಾಂಗ್ ಡೆಲ್ಲಿ ಮತ್ತು ಗುಜರಾತ್ ಜೈಂಟ್ಸ್ ಅನುಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದೆ.