ಹುಬ್ಬಳ್ಳಿ: ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ಗೆದ್ದು ಪೂರ್ಣ ಅಂಕ ಗಳಿಸುವ ಕರ್ನಾಟಕದ ಆಸೆಗೆ ಚಂಡೀಗಢದ ಕೆಳ ಮಧ್ಯಮ ಕ್ರಮಾಂಕದ ಆಟಗಾರರಾದ ಮಯಂಕ್ ಸಿಧು (ಔಟಾಗದೇ 56), ಕರಣ್ ಕೈಲಾ (ಔಟಾಗದೇ 25) ದಿಟ್ಟ ಆಟದ ಮೂಲಕ ಅಡ್ಡಿಯಾದರು. ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತು.
ರಾಜನಗರದ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಸೋಮವಾರ ನಾಲ್ಕನೇ ದಿನದಾಟದಲ್ಲಿ ಚಂಡೀಗಢ ತಂಡವನ್ನು ಆಲೌಟ್ ಮಾಡಿ ಇನಿಂಗ್ಸ್ ಗೆಲುವು ಸಾಧಿಸುವ ಆತಿಥೇಯ ತಂಡದ ಲೆಕ್ಕಾಚಾರ ಕೈಗೂಡಲಿಲ್ಲ. 296 ರನ್ಗಳ ಮೊದಲ ಇನಿಂಗ್ಸ್ ಮುನ್ನಡೆ ಆಧಾರದಲ್ಲಿ ಕರ್ನಾಟಕ ತಂಡ ಮೂರು ಅಂಕಕ್ಕೆ ಸಮಾಧಾನ ಪಡಬೇಕಾಯಿತು.
ಕರ್ನಾಟಕ ತಂಡ ‘ಸಿ’ ಗುಂಪಿನಲ್ಲಿ 27 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯಿತು. ತಮಿಳುನಾಡು (28 ಅಂಕ) ಅಗ್ರಸ್ಥಾನ ಗಳಿಸಿತು. ಈ ಎರಡೂ ತಂಡಗಳು ‘ಸಿ’ ಗುಂಪಿನಲ್ಲಿ ಕ್ವಾರ್ಟರ್ಫೈನಲ್ ಪ್ರವೇಶಿಸಿದವು.
ಕರ್ನಾಟಕ ಫೆಬ್ರುವರಿ 23ರಿಂದ 27ರವರೆಗೆ ನಾಗಪುರದಲ್ಲಿ ನಡೆಯುವ ಕ್ವಾರ್ಟರ್ಫೈನಲ್ನಲ್ಲಿ ಫೆ.23ರಂದು ವಿದರ್ಭ ತಂಡವನ್ನು ಎದುರಿಸಲಿದೆ. ವಿದರ್ಭ ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆಯಿತು.