ಮೇಲ್ ಡಾಮಿನೇಟಿಂಗ್ ಸೊಸೈಟಿ ಅಂತ ಏನು ಕರೀತಾರೆ ಅಲ್ಲಿ ಗಂಡಸರದೇ ಮೇಲುಗೈ, ಮನೆಯ ವಹಿವಾಟು ಅವರೇ ನೋಡಿಕೊಳ್ಳುವುದು. ಮನೆಯ ಯಜಮಾನಿಕೆ, ಹಣಕಾಸಿನ ವಿಚಾರ, ಮಕ್ಕಳ ವಿದ್ಯಾಭ್ಯಾಸದತ್ತ ಗಮನ ಹೀಗೆ ಅವರು ಹೇಳಿದಂತೆ ಮನೆಯಲ್ಲಿ ಎಲ್ಲರೂ ಕೇಳುವಂತೆ ಇರಬೇಕು.
ಫೀಮೇಲ್ ಡಾಮಿನೇಟಿಂಗ್ ಸೊಸೈಟಿಯಲ್ಲಿ ಹೆಂಗಸರ ಮೇಲುಗೈ. ಅವರ ನಿರ್ವಹಣೆಯಲ್ಲಿಯೇ ಎಲ್ಲಾ ನಡೆಯುತ್ತದೆ. ಭಾರತದ ಕೆಲವು ರಾಜ್ಯದಲ್ಲಿ ಫೀಮೇಲ್ ಡಾಮಿನೇಟಿಂಗ್ ಮನೆಗಳಲ್ಲಿ ಹೆಂಗಸರು ಎಲ್ಲವನ್ನೂ ನಿರ್ವಹಿಸುತ್ತಾರೆ. ವ್ಯಾಪಾರ ವಹಿವಾಟು ಎಲ್ಲಾ ಅವರ ಕೈಯಲ್ಲಿಯೇ ಇರುತ್ತೆ. ಆಸ್ತಿ ವಿಚಾರದಲ್ಲಿಯೂ ಅಷ್ಟೆ ತಾಯಿ ಆಸ್ತಿ ಹೆಣ್ಣು ಮಕ್ಕಳಿಗೇ ಬರುತ್ತದೆ.
ಇನ್ನು ಗಂಡುಮಕ್ಕಳ ವಿಷಯಕ್ಕೆ ಬಂದರೆ ಕೆಲವು ಸಮಾಜದಲ್ಲಿ ಆಸ್ತಿ ಗಂಡು ಮಕ್ಕಳಿಗೇ ಬರಬೇಕು ಅವರ ವಂಶ ಬೆಳಗುವವರೆಂದು ಹಿಂದಿನಿಂದಲೂ ಬಂದಿರುವ ಪದ್ದತಿ. ಕೆಲವು ಮನೆಗಳಲ್ಲಿ ಹೆಣ್ಣು ಮಕ್ಕಳಿಗೆ ಮದುವೆ ಸಮಯದಲ್ಲಿ ವರದಕ್ಷಿಣೆ ರೂಪದಲ್ಲಿ ಅಥವಾ ವರೋಪಚಾರದ ರೂಪದಲ್ಲಿ ಹಣ ಒಡವೆ ಕೊಟ್ಟಿರುತ್ತಾರೆ. ಅದು ಅವಳ ಆಪತ್ಕಾಲದಲ್ಲಿ ಉಪಯೋಗಿಸಿಕೊಳ್ಳಲೆಂದು.
ಆದರೆ ಇತ್ತೀಚಿನ ದಿನಗಳಲ್ಲಿ ಕೋರ್ಟ್ ಹೆಣ್ಣು ಮಕ್ಕಳಿಗೂ ಆಸ್ತಿಯಲ್ಲಿ ಸಮಪಾಲು ಕೊಡಬೇಕು ಎಂದು ಆದೇಶ ನೀಡಿದೆ. ಈ ವರದಕ್ಷಿಣೆ ಅಥವಾ ವರೋಪಚಾರದ ಹಿಂದಿನ ಉದ್ದೇಶ ಅರ್ಥ ಮಾಡಿಕೊಂಡರೆ ಮನೆಯಲ್ಲಿ ಆಸ್ತಿಗಾಗಿ ಜಗಳ, ಮನಸ್ಥಾಪ, ಕೊಲೆ ಸುಲಿಗೆ ನಡೆಯುತ್ತಿರಲಿಲ್ಲ. ಹೆಣ್ಣು ಮಕ್ಕಳು ಮದುವೆಯಾದ ನಂತರ ತನ್ನ ಮನೆ ಸಂಸಾರ ನೋಡಿಕೊಂಡು ಹೋಗಬೇಕೇ ವಿನಃ ತವರು ಮನೆಯ ಎಲ್ಲಾ ವಿಷಯಗಳಿಗೂ ತಲೆ ಹಾಕಬಾರದು.
ತನ್ನ ಸ್ಥಾನವೇನು ಎಂದು ಅರಿತು ಹಿತಮಿತವಾಗಿ ಇದ್ದು ಹೋಗಿ ಬಂದು ಮಾಡಿಕೊಂಡಿರಬೇಕು. ಅಣ್ಣ ತಮ್ಮಂದಿರ ವಿಷಯದಲ್ಲಿ ತುಂಬಾ ಹಸ್ತಕ್ಷೇಪ ಮಾಡಲು ಹೋಗಬಾರದು. ತಂದೆ ತಾಯಿಯನ್ನು ಬಹಳ ಗೌರವವಾಗಿ ಕಾಣಬೇಕು. ತನಗೇನು ಸ್ಥಾನ ಮಾನ ಎಂದು ನೋಡಿಕೊಂಡು ಇದ್ದರೆ ಎಲ್ಲರಿಗೂ ನೆಮ್ಮದಿಯಾಗಿರುತ್ತದೆ.
ಗಂಡು ಮಕ್ಕಳೂ ಸಹ ಬರೀ ಆಸ್ತಿ ಹಣವೆನ್ನದೆ ತಂದೆ ತಾಯಿಯರ ಬಗ್ಗೆ ಅಕ್ಕ ತಂಗಿಯರು, ಅಣ್ಣ ತಮ್ಮಂದಿರ ಜೊತೆ ತುಂಬಾ ಆತ್ಮೀಯತೆಯಿಂದ ಇರಬೇಕಾಗುತ್ತದೆ. ಗಂಡು ಮಕ್ಕಳೆಂದು ಯಾರಿಗೂ ಗರಿಮೆ ಇಲ್ಲ ಹೆಣ್ಣು ಮಕ್ಕಳೆಂದು ಯಾರಿಗೂ ಕೀಳೂ ಇಲ್ಲ. ಯಾವ ಮಕ್ಕಳಾದರೂ ಮಕ್ಕಳಷ್ಟೆ.
ಕೆಲವು ಮನೆಗಳಲ್ಲಿ ಹೆಣ್ಣು ಮಕ್ಕಳಿಗೆ ಬಹಳ ಪ್ರಾಶಸ್ತ್ಯ ಕೊಟ್ಟಿರುತ್ತಾರೆ ಗಂಡುಮಕ್ಕಳನ್ನು ಸಾಧಾರಣವಾಗಿ ಕಾಣುತ್ತಾರೆ ಹಾಗೆಯೇ ಹೆಣ್ಣು ಮಕ್ಕಳನ್ನು ಸಾಧಾರಣವಾಗಿ ಕಂಡು ಗಂಡುಮಕ್ಕಳಿಗೆ ಪ್ರಾಶಸ್ತ್ಯ ಕೊಡುತ್ತಾರೆ. ಇದು ತಂದೆ ತಾಯಿ ಮನೆಯ ಹಿರಿಯರು ಮಾಡುವ ತಾರತಮ್ಯ. ಇದೇ ರೂಢಿಯಾಗಿ ಮಕ್ಕಳ ಮನಸಿನಲ್ಲಿ ಬಹಳ ಪರಿಣಾಮ ಬೀರಿ ಅವರು ಬೆಳೆಯುತ್ತಾ ಹೋದಂತೆ ತಮ್ಮತನವನ್ನೇ ಮರೆತುಬಿಟ್ಟಿರುತ್ತಾರೆ. ಬದುಕಿಗೊಂದು ಬುನಾದಿ ಬೇಕು.
ವ್ಯವಸ್ಥಿತವಾಗಿ ನಡೆಯಲು ಅವರ ಸಾಮರ್ಥ್ಯದಿಂದ ಮಾತ್ರ ಸಾಧ್ಯ. ಶಿಕ್ಷಣ ಕ್ಷೇತ್ರದಲ್ಲಿ ಆಗಲಿ ಕೆಲಸ ಕಾರ್ಯಗಳಲ್ಲಿ ಆಗಲಿ ಅವರ ಸಾಮರ್ಥ್ಯದ ಮೇಲೆ ನಿಂತಿರುತ್ತದೆ. ಪ್ರಶ್ನೆ ಪತ್ರಿಕೆ ಹೆಣ್ಣು ಮಕ್ಕಳಿಗೆ ಬೇರೆ ಗಂಡು ಮಕ್ಕಳಿಗೆ ಬೇರೆ ಬೇರೆ ಇರುವುದಿಲ್ಲ ಹಾಗಾಗಿ ಇಲ್ಲಿ ಎಲ್ಲರೂ ಸಮಾನರೇ. ಕೆಲವು ಮನೆತನದಲ್ಲಿ ಅವರ ಪರಂಪರೆಯಂತೆ ನಡೆದುಕೊಂಡು ಬಂದಿರುತ್ತಾರೆ. ಆದರೆ ಹೊರಗಿನ ಸಮಾಜದಲ್ಲಿ ಎಲ್ಲರೂ ಒಂದೇ. ಯಾರೂ ಮೇಲಲ್ಲ ಯಾರೂ ಕೀಳಲ್ಲ.