ಹೊಸಕೋಟೆ: ಸರಕಾರ ಜಾರಿಗೊಳಿಸುತ್ತಿರುವ ರಾಗಿ ಮಾಲ್ಟ್ ಯೋಜನೆಯಿಂದ ವಿದ್ಯಾರ್ಥಿಗಳಲ್ಲಿ ಅಪೌಷ್ಠಿಕತೆ ನಿವಾರಣೆಗೆ ಸಹಕಾರಿ ಯಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಕೆ.ಪದ್ಮನಾಭ್ ಹೇಳಿದರು.ಅವರು ನಗರದ ಕೆ.ಆರ್.ರಸ್ತೆಯಲ್ಲಿರುವ ಜಿಕೆಬಿಎಂಎಸ್ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ “ಸಾಯಿ ಶ್ಯೂರ್ ರಾಗಿ ಹೆಲ್ತ್ ಮಿಕ್ಸ್ ವಿತರಣೆ”ಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಲಾ ಶಿಕ್ಷಣ ಇಲಾಖೆ, ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಮತ್ತು ಕೆಎಂಎಫ್ ಸಂಸ್ಥೆಯ ಸಹಭಾಗವಿತ್ವದಲ್ಲಿ ಮಧ್ಯಾಹ್ನದ ಉಪಹಾರ ಯೋಜನೆಯಡಿ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಪೂರಕವಾದ ಪೌಷ್ಠಿಕ ಆಹಾರ ವಿತರಣೆ ಮಾಡಲಾಗುವುದು. ಇದರ ಸೇವನೆಯಿಂದ ವಿದ್ಯಾರ್ಥಿಗಳಲ್ಲಿ ಜ್ಞಾನಶಕ್ತಿ, ಆರೋಗ್ಯ ವೃದ್ಧಿಗೊಳ್ಳುವುದರೊಂದಿಗೆ ದೈಹಿಕ ಬೆಳವಣಿಗೆ ಸಹ ಉತ್ತಮವಾಗಿ ಆಗಲಿದೆ.
ಸರಕಾರ ಈಗಾಗಲೇ ನೀಡುತ್ತಿರುವ ಮೊಟ್ಟೆ ಯೋಜನೆಯು ಇತರೆ ರಾಜ್ಯಗಳಿಗೂ ಸಹ ಮಾದರಿಯಾಗಿದೆ. ವಿದ್ಯಾರ್ಥಿಗಳು ಕಲಿಕಾ ಪ್ರಗತಿ ಸಾಧಿಸುವುದರೊಂದಿಗೆ ಸದೃಢ ಮನಸ್ಸಿನಿಂದ ಸಮತೋಲನಾ ಬೆಳವಣಿಗೆ ಹೊಂದಲು ಈ ಯೋಜನೆಯು ಪರಿಣಾಮಕಾರಿಯಾಗಿದೆ.
ಸರಕಾರಿ ಶಾಲೆಗಳ ಬಗ್ಗೆ ಸಮುದಾಯದಲ್ಲಿ ಅಭಿಮಾನ ಮೂಡಿಸಿ ದಾಖಲಾತಿ ವೃದ್ಧಿಗೊಳ್ಳಲು ಸಹ ಇಂತಹ ಯೋಜನೆಗಳು ಸಹಕಾರಿಯಾಗಲಿವೆ. ಸರಕಾರಿ ಶಾಲೆಗಳಲ್ಲಿ ಅಗತ್ಯ ಅರ್ಹತೆ ಪಡೆದ ಪ್ರತಿಭಾವಂತ ಶಿಕ್ಷಕರಿದ್ದು, ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಮಧ್ಯಾಹ್ನ ಬಿಸಿಯೂಟದಂತಹ ಸೌಲಭ್ಯಗಳನ್ನು ಕಲ್ಪಿಸಿದ್ದು ವಿದ್ಯಾರ್ಥಿಗಳು ಇವುಗಳ ಸಮರ್ಪಕ ಬಳಕೆಯಿಂದ ಶೈಕ್ಷಣಿಕ ಪ್ರಗತಿ ಸಾಧಿಸಬೇಕು ಎಂದರು.
ಪಿಎಂ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯ ತಾಲೂಕು ಸಹಾಯಕ ನಿರ್ದೇಶಕಿ ಎಸ್.ಬಿ. ಹೇಮಲತಾ ಮಾತನಾಡಿ ವಿದ್ಯಾ
ರ್ಥಿಗಳಿಗೆ ಸಿರಿಧಾನ್ಯಗಳ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಇದರಿಂದ ವಿದ್ಯಾರ್ಥಿ
ಗಳಲ್ಲಿ ರೋಗನಿರೋಧಕ ಶಕ್ತಿ ಸಹ ಹೆಚ್ಚಳ ವಾಗಲಿದ್ದು ಕಲಿಕೆಯಲ್ಲಿ ಲವಲವಿಕೆಯಿಂದ ತೊಡಗಲು ಪ್ರೇರಣೆ ದೊರಕಲಿದೆ. ತಾಲೂಕಿನ ಸರಕಾರಿ ಹಾಗೂ ಅನುದಾನಿತ 275 ಶಾಲೆಗಳಲ್ಲಿ 17,935 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ.
ಮಾರ್ಚ್ 1ರಿಂದ ವಿರತಣೆ ಪ್ರಾರಂಭಗೊಳ್ಳುವ ನಿರೀಕ್ಷೆಯಿದೆ. ತಾಲೂಕಿನಲ್ಲಿಯೇ ಅತಿ ಹೆಚ್ಚು ಸುಮಾರು880 ವಿದ್ಯಾರ್ಥಿಗಳನ್ನು ಹೊಂದಿರುವ ಜಿಕೆಬಿಎಂಎಸ್ ಶಾಲೆಯಲ್ಲಿ ಇದನ್ನು ಸಾಂಕೇತಿಕವಾಗಿ ಉದ್ಘಾಟಿಸಲಾಗುತ್ತಿದೆ ಎಂದು ತಿಳಿಸಿದರು.
ನಗರಸಭೆ ಸದಸ್ಯೆ ಗಾಯತ್ರಿ ವಿಜಯಕುಮಾರ್, ಶಾಲಾ ಮುಖ್ಯ ಶಿಕ್ಷಕಿ ಗ್ಲಾಡಿಯಸ್, ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ
ಅಧ್ಯಕ್ಷ ಬಿ.ನಾಗರಾಜ್, ತಾಲೂಕು ಪ್ರಾಥಮಿಕಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಲ್ಲಾಭಕ್ಷ್, ಪದಾಧಿಕಾರಿಗಳಾದ ಗಂಗಾಧರ್, ರಾಜಣ್ಣ, ತೇಜೊರಾಮ್, ಭಾರತಿ, ಉಷಾರಾಣಿ, ಲಲಿತಮ್ಮ, ಆಶಾ, ಗೀತಾ, ಮುನಿಶಾಮಣ್ಣ, ಸುಕುಮಾರ್, ಗಂಗರಾಜು, ಕ್ಲಸ್ಟರ್ ಸಂಪನ್ಮೂಲ ಪ್ರಭಾರಿ ಕ್ಷೇತ್ರ ಸಮನ್ವಯಾಧಿಕಾರಿ ನಾಗರಾಜ್, ವ್ಯಕ್ತಿಗಳಾದ ತ್ಯಾಗರಾಜ್, ನಟರಾಜ್, ಶಿಕ್ಷಕರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಾಯಿ ಶ್ಯೂರ್ ರಾಗಿ ಹೆಲ್ತ್ ಮಿಕ್ಸ್ನ್ನು ವಿತರಿಸಲಾಯಿತು.