ಬೆಂಗಳೂರು: ಮುಂದಿನ ತಿಂಗಳು ಬೆಂಗಳೂರಿನಲ್ಲಿ ಮಿನಿ ಒಲಿಂಪಿಕ್ಸ್ ನಡೆಸಲಾಗುವುದು ಎಂದು ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಕೆ.ಗೋವಿಂದರಾಜ್ ಹೇಳಿದರು.ರಾಜಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಕರ್ನಾಟಕ ಒಲಿಂಪಿಕ್ ಸಂಸ್ಥೆಯ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಮಂಗಳೂರು ಅಥವಾ ಉಡುಪಿಯಲ್ಲಿ ಸೀನಿಯರ್ ಒಲಿಂಪಿಕ್ಸ್ ಆಯೋಜಿಸಲಾಗುವುದು. ಸೀನಿಯರ್ ಮತ್ತು ಜೂನಿಯರ್ ಒಲಿಂಪಿಕ್ಸ್ಗೆ ಸರ್ಕಾರ ಈಗಾಗಲೇ ಅನುದಾನ ಬಿಡುಗಡೆ ಮಾಡಿದೆ. ಸಾಧಕ ಕ್ರೀಡಾಪಟುಗಳಿಗೆ ನಿವೇಶನ ನೀಡುವುದು ಬಾಕಿ ಇದೆ. ಈ ಬಗ್ಗೆ ಕ್ಯಾಬಿನೆಟ್ನಲ್ಲಿ ಚರ್ಚಿಸಿ ಆದಷ್ಟು ಬೇಗ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದರು.
ಕ್ರೀಡಾಪಟುಗಳು ವಲಸೆ ಹೋಗುವುದನ್ನು ತಡೆಯಲು ಎಲ್ಲಾ ಇಲಾಖೆಗಳ ನೇಮಕಾತಿಯಲ್ಲಿ ಶೇ 2ರಷ್ಟು ಮೀಸಲಾತಿ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದರು.
ಗೃಹ ಸಚಿವ ಜಿ.ಪರಮೇಶ್ವರ್ ಮಾತನಾಡಿ, ‘ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲು ರಾಜ್ಯದಲ್ಲಿ 15 ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಲಾಗಿದೆ. ತವರು ಜಿಲ್ಲೆ ತುಮಕೂರಿನಲ್ಲಿ 57 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಿಸಲಾಗಿದೆ. ರಾಜ್ಯದ ಎಲ್ಲಾ ಇಲಾS ಗಳ ನೇಮಕಾತಿಯಲ್ಲಿ ಶೇಕಡ 3ರಷ್ಟು ಮೀಸಲಾತಿಯನ್ನು ಕ್ರೀಡಾ ಪಟುಗಳಿಗೆ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು’ ಎಂದರು.
‘ರಾಜ್ಯದಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆ ಆಗಬೇಕಿದೆ. ಅಮೆರಿಕ, ಚೀನಾ, ಯುರೋಪ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಇದೆ. ಈ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು. ಬೆಂಗಳೂರಿನಲ್ಲಿ 70 ಎಕರೆ ಜಾಗದಲ್ಲಿ ಕ್ರೀಡಾ ನಗರಿ ನಿರ್ಮಿಸುವ ಬಗ್ಗೆ ಪ್ರಸ್ತಾವ ಇದೆ’ ಎಂದು ಹೇಳಿದರು.
ಜಿ.ಪರಮೇಶ್ವರ್ ಗೃಹ ಸಚಿವ ನಾನು ವಿಶ್ವವಿದ್ಯಾಲಯ ಮಟ್ಟದಲ್ಲಿ ನೂರು ಮೀಟರ್ ಅನ್ನು 10.09 ಸೆಕೆಂಡ್ನಲ್ಲಿ ಓಡಿದ್ದೇನೆ. ಅಂದು ಮಣ್ಣಿನ ಟ್ರಾಕ್ನಲ್ಲಿ ಮಾಡಿದ ದಾಖಲೆ ಈಗಲೂ ಯಾರು ಮುರಿದಿಲ್ಲ. ಆ ದಾಖಲೆ ಮುರಿದವರಿಗೆ ನೀಡಲು ಚಿನ್ನದ ಪದಕ ಸಹ ಇಡಲಾಗಿದೆ.