ಬೆಂಗಳೂರು:ಕಂಬಳವನ್ನು ಕರ್ನಾಟಕ ರಾಜ್ಯ ಕ್ರೀಡೆ ಅಥವಾ ನಾಡ ಕ್ರೀಡೆ ಎಂದು ಘೋಷಿಸಿ ಅಗತ್ಯ ಅನುದಾನ ನೀಡುವಂತೆ ನಿಯಮ 72 ರಡಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಪ್ರಸ್ತಾಪಿಸಿದ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ.ನಾಗೇಂದ್ರ, ಕಂಬಳ ಕ್ರೀಡೆಯ ಸಾಧಕರಿಗೆ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ನೀಡುತ್ತಿದ್ದು, ಇದು 1 ಲಕ್ಷ ನಗದು ಪುರಸ್ಕಾರ ಒಳಗೊಂಡಿರುತ್ತದೆ.
ಹಾಗೆಯೇ ಕಂಬಳವನ್ನೂ ಒಳಗೊಂಡಂತೆ ಕ್ರೀಡೆಗಳ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡಿರುವ ಸಂಸ್ಥೆಗಳಿಗೆ 5 ಲಕ್ಷ ನಗದು ಪುರಸ್ಕಾರದ ಕ್ರೀಡಾ ಪೋಷಕ ಪ್ರಶಸ್ತಿ ನೀಡಲಾಗುತ್ತಿದೆ. ಮೂಡುಬಿದರೆಯ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ 10 ಎಕರೆ ಜಾಗದಲ್ಲಿ ಕೋಟಿ ಚೆನ್ನಯ್ಯ ಹೆಸರಿನ ಜೋಡು ಕೆರೆಯನ್ನು ಕಂಬಳಕ್ಕಾಗಿ ನಿರ್ಮಿಸಲಾಗಿದೆ.
ಕಾರ್ಕಳ ತಾಲ್ಲೂಕಿನ ಮಿಯ್ಯಾರಿನಲ್ಲಿ 5 ಎಕರೆ ಪ್ರದೇಶದಲ್ಲಿ ಲವಕುಶ ಕಂಬಳ ಕ್ರೀಡಾಂಗಣ ನಿರ್ಮಿಸಲಾಗಿದೆ.ಅಲ್ಲಿ ನಡೆಯುವ ಕಂಬಳಕ್ಕೆ ಸರ್ಕಾರದ ವತಿಯಿಂದ ಅನುದಾನ ನೀಡಲಾಗುತ್ತಿದೆ. ಕರ್ನಾಟಕ ರಾಜ್ಯ ಕಂಬಳ ಸಂಸ್ಥೆ ರಚನೆಯಾಗಿ ಕರ್ನಾಟಕ ಕ್ರೀಡಾ ಪ್ರಾಧಿಕಾರಕ್ಕೆಪ್ರಸ್ತಾವನೆ ಸಲ್ಲಿಸಿದಲ್ಲಿ ಅದಕ್ಕೆ ರಾಜ್ಯ ಕ್ರೀಡಾ ಸಂಸ್ಥೆಯಾಗಿ ಮಾನ್ಯತೆ ನೀಡುವ ಬಗ್ಗೆ ಕ್ರಮ ವಹಿಸಲಾಗುವುದೆಂದರು