ಶಿಡ್ಲಘಟ್ಟ: ಕಾಂಗ್ರೆಸ್ ಪಕ್ಷ ಎಲ್ಲರನ್ನು ಪಕ್ಷಕ್ಕೆ ಬರಮಾಡಿಕೊಳ್ಳುತ್ತದೆ. ಯಾರನ್ನು ಕಡೆಗಣಿಸುವುದಿಲ್ಲ. ಗೆಲುವಿಗೆ ಪ್ರತಿಯೊಂದು ಮತವು ಅಮೂಲ್ಯವಾದದು. ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ರಾಜೀವ್ ಗೌಡ ಅವರೇ ಪಕ್ಷವನ್ನು ಮುನ್ನಡೆಸುತ್ತಾರೆ. ಚುನಾವಣೆಯನ್ನು ಅವರ ನೇತೃತ್ವದಲ್ಲೇ ನಡೆಸುತ್ತೇವೆ ಎಂದು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಬೈರತಿ ಸುರೇಶ್ ಅವರು ಸ್ಪಷ್ಟಪಡಿಸಿದರು.
ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಗೌತಮ್ ಅವರ ಜೊತೆ ಕುರುಡುಮಲೆಯ ವಿನಾಯಕನ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜೀವ್ಗೌಡ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪಕ್ಷವನ್ನು ಉಳಿಸಿದ್ದಾರೆ. ಶ್ರೀಮತಿ ಸಹನಾ ರಾಜೇಗೌಡ ಅವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ವಿಧಾನಸಭಾ ಕ್ಷೇತ್ರದ ಎಲ್ಲಾ ಹೋಬಳಿಗಳಲ್ಲಿ ಕಾರ್ಯಕರ್ತರು ಮತ್ತು ಮುಖಂಡರೊಂದಿಗೆ ನಿರಂತರ ಸಂಪರ್ಕ ಹೊಂದಿದ್ದಾರೆ.
ಅವರನ್ನು ಹೊರತುಪಡಿಸಿ ಉಳಿದವರು ಪಕ್ಷಕ್ಕೆ ಬಂದು ಪಕ್ಷವನ್ನು ಬಲಪಡಿಸುತ್ತಾರೆ. ಅಂತಹವರನ್ನು ನಾವು ಗೌರವದಿಂದ ನಡೆಸಿಕೊಳ್ಳುತ್ತೇವೆ. ಅವರಿಗೆ ಸೂಕ್ತ ಅವಕಾಶಗಳನ್ನು ಸಹ ಕಲ್ಪಿಸಿ ಕೊಡುತ್ತೇವೆ. ಪಕ್ಷಕ್ಕಿಂತ ದೊಡ್ಡವರು ಯಾರೂ ಇಲ್ಲ. ಮಾಜಿ ರೈಲ್ವೆ ಸಚಿವರಾದ ಸಿ ಕೆ ಜಾಫರ್ ಷರೀಫ್ ಅವರು ಅವರ ಮೊಮ್ಮಗನಿಗೆ ಪಕ್ಷದಿಂದ ಟಿಕೆಟ್ ಕೊಡಿಸಿಕೊಡಲು ಸಾಧ್ಯವಾಗಲಿಲ್ಲ.
ಹಾಗೆಂದು ಅವರು ನಮ್ಮ ಪಕ್ಷಕ್ಕೆ ವಿರೋಧಿ ಎಂದು ನಾವು ಪರಿಗಣಿಸಲಿಲ್ಲ. ಅವಕಾಶ ಬಂದಾಗ ಪಕ್ಷವು ನಿಷ್ಠಾವಂತರಿಗೆ ಅವಕಾಶ ಕಲ್ಪಿಸಿ ಕೊಡುತ್ತದೆ ಎಂದು ಸಚಿವ ಭೈರತಿ ಸುರೇಶ್ ಅವರು ಸ್ಪಷ್ಟಪಡಿಸಿದರು.ಪತ್ರಿಕಾಗೋಷ್ಠಿಯಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗೌತಮ್ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ: ಎಂ. ಸಿ. ಸುಧಾಕರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ನಸಿರ್ ಅಹಮದ್ ಮುಂತಾದವರು ಉಪಸ್ಥಿತರಿದ್ದರು.