This is the title of the web page
This is the title of the web page

ವಿಷನ್ ಚಿಕ್ಕಬಳ್ಳಾಪುರ ನಿರ್ಮಾಣಕ್ಕೆ ಸಚಿವ ಡಾ.ಎಂ.ಸಿ.ಸುಧಾಕರ್ ಕರೆ

ಚಿಕ್ಕಬಳ್ಳಾಪುರ: ಜಿಲ್ಲೆಯನ್ನು ಸ್ವಚ್ಛ ಮತ್ತು ಹಸಿರು ಜಿಲ್ಲೆಯನ್ನಾಗಿಸಲು ಹಾಗೂ ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿಸಲು ವಿಷನ್ (ದೃಷ್ಟಿ) ಇಟ್ಟುಕೊಂಡಿದ್ದೇನೆ. ಈ ಕಾರ್ಯಕ್ಕೆ ಜಿಲ್ಲೆಯ ಎಲ್ಲಾ ಅಧಿಕಾರಿಗಳಿಂದ ಬದ್ಧತೆ, ಉತ್ತರದಾಯಿತ್ವ ಮತ್ತು ಸಹಕಾರವನ್ನು ಬಯಸುತ್ತೇನೆಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ತಿಳಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡೆದ “ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ”ಯನ್ನು ಉದ್ದೇಶಿಸಿ ಮಾತನಾಡಿದರು.ದೇಶದ ಸ್ವಚ್ಛ ನಗರ ಎಂದೇ ಖ್ಯಾತಿಯಾಗಿರುವ ಮಧ್ಯಪ್ರದೇಶದ ಇಂದೋರ್ ನಗರದ ಮಾದರಿಯಲ್ಲಿ ಜಿಲ್ಲೆಯ ನಗರಗಳನ್ನು ಅಭಿವೃದ್ಧಿ ಪಡಿಸಲು ಯೋಜಿಸಲಾಗಿದೆ. ಆ ನಿಟ್ಟಿನಲ್ಲಿ ಆರಂಭಿಕ ಕ್ರಮವನ್ನೂ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಆರೋಗ್ಯ, ಶಿಕ್ಷಣ ಉನ್ನತ ದರ್ಜೆಯಲ್ಲಿರಬೇಕು.

ಎಲ್ಲರಿಗೂ ಶುದ್ಧ ಕುಡಿಯುವ ನೀರು ಸಿಗುವಂತಾಗಬೇಕು. ಜನ ನಿರ್ಭಯವಾಗಿ ಜೀವಿಸುವಂತಹ ವಾತಾವರಣ ಇರಬೇಕು. ಅಪರಾಧಗಳು ತಗ್ಗಬೇಕು. ನಿರುದ್ಯೋಗ ಸಮಸ್ಯೆ ನಿವಾರಣೆಯಾಗಿ ಯೋಜಿತ ರೀತಿಯಲ್ಲಿ ಕೈಗಾರಿಕರಣ ಆಗಬೇಕು. ಅತೀ ಸಮೀಪದಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅನುಕೂಲತೆಗಳನ್ನು ಜಿಲ್ಲೆಯ ಪಡೆಯಬೇಕು.

ಕೃಷಿ ಮತ್ತು ತೋಟಗಾರಿಕಾ ವಲಯ (Agri & Horticulture Hub)ನಿರ್ಮಾಣವಾಗಿ ಬೆಲೆ ಕುಸಿತದ ಸಂದರ್ಭಗಳಲ್ಲೂ ಕುಸಿದ ತೋಟಗಾರಿಕೆ ಉತ್ಪನ್ನಗಳನ್ನು ಸಂರಕ್ಷಿಸುವ ವ್ಯವಸ್ಥೆ ನಿರ್ಮಾಣವಾಗಿ ರೈತರಿಗೆ ಉಪಯೋಗವಾಗಬೇಕು ಜೊತೆಗೆ ರೈತ ಸ್ನೇಹಿ ಮಾರುಕಟ್ಟೆ ನಿರ್ಮಾಣವಾಗಬೇಕು. ಹೆಚ್.ಎನ್. ವ್ಯಾಲಿ ಮತ್ತು ಕೆ.ಸಿ.ವ್ಯಾಲಿ ನೀರಾವರಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಕುರಿತು ಚರ್ಚೆಗಳಾಗಬೇಕು.

ಜಿಲ್ಲೆಯ ಪ್ರವಾಸಿ ತಾಣಗಳನ್ನು ಜಗತ್ತಿಗೆ ಹೆಚ್ಚಿನ ಮಟ್ಟದಲ್ಲಿ ಪಸರಿಸುವ ವ್ಯವಸ್ಥೆಯಾಗಬೇಕು. ಈ ಎಲ್ಲ ಕಾರ್ಯಗಳಿಗೆ ಜಿಲ್ಲಾಡಳಿತದ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ, ಮಾಧ್ಯಮ ಪ್ರತಿನಿಧಿಗಳ ಹಾಗೂ ಸಾರ್ವಜನಿಕರ ಸಹಕಾರ ಬೇಕು. ಹೊಸತನದ ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕೆಂದು ಸಚಿವರು ಮನವಿ ಮಾಡಿದರು. ಈ ವೇಳೆ ಸಚಿವರು ಕೃಷಿ, ತೋಟಗಾರಿಕೆ, ರೇಷ್ಮೆ ಆರೋಗ್ಯ, ನೀರಾವರಿ, ಪಶುಪಾಲನಾ ಇಲಾಖೆಗಳ ಯೋಜನೆಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು.

ಮುಂಗಾರು ಪೂರ್ವದಲ್ಲಿ ವಾಡಿಕೆ ಪ್ರಮಾಣದಲ್ಲಿ ಮಳೆಯಾಗಿದ್ದರೂ ಸಹ ಜೂನ್ ತಿಂಗಳಲ್ಲಿ ಮಳೆಯ ಅಭಾವ ಉಂಟಾಗಿ ಭೂಮಿ ಉಳುಮೆ ಕಾರ್ಯಗಳು ಮತ್ತು ಸಿದ್ದತಾ ಕಾರ್ಯಗಳು ನಿಂತು ಹೋಗಿ ರೈತರಿಗೆ ತೊಡಕಾಗಿದೆ. ಜಿಲ್ಲೆಯಲ್ಲಿ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳಿಗೆ ಯಾವುದೇ ಕೊರತೆ ಉಂಟಾಗಿಲ್ಲ ಎಂದು ಅಧಿಕಾರಿಗಳು ಸಚಿವರಿಗೆ ಸಭೆಯಲ್ಲಿ ಮಾಹಿತಿ ಒದಗಿಸಿದರು.

ಪ್ರತಿಕ್ರಿಯಿಸಿದ ಸಚಿವರು ಟೋಮೋಟೋ ಬೆಳೆಗೆ ಬಂದಿರುವ ಬಿಳಿ ನೊಣ (ವೈಟ್ ಫ್ಲೈ) ರೋಗ ನಿವಾರಣೆಗೆ ತುರ್ತು ಕ್ರಮ ಕೈಗೊಳ್ಳುವಂತೆ ತೋಟಗಾರಿಕೆ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು. ಮನೆ ಮನೆಗೆ ನಲ್ಲಿ ಸಂಪರ್ಕದ ಮೂಲಕ ಕುಡಿಯುವ ನೀರು ಪೂರೈಸುವ ಜಲ ಜೀವನ್ ಮಿಷನ್ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಕಟ್ಟುನಿಟ್ಟಿನ ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಿದರು.