ಬೆಂಗಳೂರು: ಸಾಲ ಮನ್ನಾ ಆಸೆಗಾಗಿ ರೈತರು ಬರಗಾಲ ಬರಲಿ ಎಂದು ಆಶಿಸುತ್ತಾರೆ ಎಂದು ಸಚಿವ ಶಿವಾನಂದ ಪಾಟೀಲರು ಮತ್ತೊಮ್ಮೆ ರೈತರಿಗೆ ಅಪಮಾನ ಮಾಡಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಆಕ್ರೋಶ ಹೊರಹಾಕಿದ್ದಾರೆ.
ರೈತರ ಆತ್ಮಹತ್ಯೆ ಹೆಚ್ಚಾಗುತ್ತಿರುವ ಬಗ್ಗೆ ಕೇಳಿದರೆ “ಎಲ್ಲಿದೆ ಹೇಳಿ ಆತ್ಮಹತ್ಯೆ? ಸ್ವಂತಕ್ಕೆ ಯಾರಾದರೂ ಮಾಡಿಕೊಂಡವರನ್ನೆಲ್ಲ ರೈತರು ಎನ್ನಲಾಗುತ್ತದೆಯೇ” ಎಂದು ಉಪಮುಖ್ಯಮಂತ್ರಿಗಳು ಉಡಾಫೆ ಮಾತಾಡುತ್ತಾರೆ.
ಈಗ ಸಚಿವರು ಪರಿಹಾರದ ಹಣಕ್ಕಾಗಿ ಬರ ಬರಲಿ ಎಂದು ರೈತರು ಆಸೆ ಪಡುತ್ತಾರೆ ಎಂದು ಹಗುರವಾಗಿ ಮಾತನಾಡುತ್ತಾರೆ.
ಭೂತಾಯಿಯನ್ನೇ ನಂಬಿ ಬದುಕುವ ರೈತ ಮಳೆ ಇಲ್ಲದೆ ತನ್ನ ಭೂಮಿ ಬಂಜರಾಗಲಿ ಎಂದು ಎಂದಿಗೂ ಕೋರುವುದಿಲ್ಲ. ಮಣ್ಣನ್ನೇ ನೆಚ್ಚಿಕೊಂಡು ಬಾಳ್ವೆ ನಡೆಸುವ ರೈತ ಆ ಮಣ್ಣು ದಾಹದಿಂದ ಸೊರಗಲಿ ಎಂದು ಎಂದಿಗೂ ಆಸೆ ಪಡುವುದಿಲ್ಲ.
ಇಡೀ ಮನುಕುಲಕ್ಕೆ ಅನ್ನ ನೀಡುವ ರೈತ ತನ್ನ ಭೂಮಿ ಹಚ್ಚ-ಹಸಿರಾಗಿರಲಿ, ತಾನು ಬೆವರು ಸುರಿಸಿ ಬೆಳೆಸಿದ ಪೈರು ತನ್ನ ಎದೆ ಎತ್ತರಕ್ಕೆ ಬೆಳೆಯಲಿ, ಅದನ್ನು ನಾಲ್ಕು ಜನ ಉಣ್ಣಲಿ ಎಂದು ಆಶಿಸುತ್ತಾನೆಯೆ ಹೊರತು ಬರಗಾಲ ಬರಲಿ ಎಂದು ಕನಸು ಮನಸಿನಲ್ಲೂ ಯೋಚಿಸುವುದಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ತಮ್ಮ ಸರ್ಕಾರಕ್ಕೆ ಬರ ಪರಿಹಾರ ಕೊಡಲು ಯೋಗ್ಯತೆ ಇಲ್ಲದಿದ್ದರೆ, ರೈತರ ಕಣ್ಣೀರು ಒರೆಸುವ ಮನಸ್ಸಿಲ್ಲದಿದ್ದರೆ ಸುಮ್ಮನಿದ್ದು ಬಿಡಿ. ಆದರೆ ಅನ್ನದಾತ ರೈತರನ್ನ ಈ ರೀತಿ ಪದೇ ಪದೇ ಅವಮಾನಿಸಬೇಡಿ. ಈಗಾಗಲೇ ಸಂಕಷ್ಟದಲ್ಲಿರುವ ರೈತ ಬಾಂಧವರನ್ನು ಇನ್ನಷ್ಟು ನೋಯಿಸಬೇಡಿ ಎಂದು ತಮ್ಮ ಮಂತ್ರಿಗಳಿಗೆ ಬುದ್ಧಿ ಮಾತು ಹೇಳಿ ಎಂದಿದ್ದಾರೆ.