ದೇವನಹಳ್ಳಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬೆಂಬಲದೊಂದಿಗೆ ವೋಲ್ವೋ ಗ್ರೂಪ್ ಹಾಗೂ ನಾರಾಯಣ ಹೆಲ್ತ್ ಸಹಯೋಗದಲ್ಲಿ ಸಿ.ಎಸ್ ಆರ್ ಯೋಜನೆಯಡಿ ಒದಗಿಸಿರುವ ಸಂಚಾರಿ ಆರೋಗ್ಯ ವಾಹನಕ್ಕೆ ದೇವನಹಳ್ಳಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
“ವೆಲ್ ನೆಸ್ ಆನ್ ವ್ಹೀಲ್ಸ್” ಎಂಬ ಪರಿಕಲ್ಪನೆಯಲ್ಲಿ ಪ್ರಾರಂಭಗೊಂಡ ಸಂಚಾರಿ ಸಮುದಾಯ ಆರೋಗ್ಯ ಕೇಂದ್ರವು ಕಾನ್ಸರ್, ಹೃದಯ ಸಂಬಂಧಿ ಸಮಸ್ಯೆಗಳು, ರೋಗನಿರ್ಣಯ ಸಮಸ್ಯೆಗಳಿಗೆ ಉಚಿತ ವೈದ್ಯಕೀಯ ಸೇವೆಗಳನ್ನು ಒದಗಿಸುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ನೂತನ ಮೈಲಿಗಲ್ಲು ಸೃಷ್ಟಿಸಲಿದೆ. ಗ್ರಾಮೀಣ ಪ್ರದೇಶದ ಜನರಿಗೂ ಗುಣಮಟ್ಟದ ವೈದ್ಯಕೀಯ ಸೌಲಭ್ಯ, ಚಿಕಿತ್ಸೆ ದೊರಕಿಸುವುದು ಇದರ ಉದ್ದೇಶ.
ಈ ಸಮಯದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ ಬಡ ಜನರ ಆರೋಗ್ಯದ ದೃಷ್ಠಿಯಲ್ಲಿ ಖಾಸಗಿ ಆಸ್ಪತ್ರೆ ಸಹಯೋಗದಲ್ಲಿ ಪ್ರಪ್ರಥಮವಾಗಿ ವಿವಿಧ ಸೌಕರ್ಯಗಳುಳ್ಳ ಸಂಚಾರಿ ಆಸ್ಪತ್ರೆಯನ್ನು ದೇವನಹಳ್ಳಿಯಲ್ಲಿ ಜಿಲ್ಲಾಡಳಿತದಿಂದ ಉದ್ಘಾಟಿಸಲಾಗಿದೆ, ರಾಜ್ಯಾಧ್ಯಂತ ಸಂಚರಿಸಿ ಅದರಲ್ಲೂ ಗ್ರಾಮೀಣ ಭಾಗದ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ನಾರಾಯಣ ಆರೋಗ್ಯ ಸಂಸ್ಥೆಗೆ ಇಂತಹ ಜವಾಬ್ದಾರಿ ನೀಡಲಾಗಿದ್ದು ಎಲ್ಲಾ ತರಹದ ಖಾಯಿಲೆಗಳಿಗೆ ಉಚಿತ ಪರೀಕ್ಷೆ ಮಾಡಲಾಗುವುದು ನಂತರ ಚಿಕಿತ್ಸೆ ಮಾಡಬೇಕಾದ ರೋಗಿಗಳನ್ನು ವಿವಿಧ ಆಸ್ಪತ್ರೆಗಳಿಗೆ ಸೇರಿಸಿ ಅವರಿಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಚಿವರು ಸಂಚಾರಿ ಸಮುದಾಯ ಆರೋಗ್ಯ ಕೇಂದ್ರ ವಾಹನದೊಳಗೆ ತೆರಳಿ ಕಾರ್ಯ ವಿಧಾನದ ಬಗ್ಗೆ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.ಜಿಲ್ಲಾಧಿಕಾರಿ ಡಾ|| ಎನ್. ಶಿವಶಂಕರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ|| ಸುನೀಲ್ಕುಮಾರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ರಾಜಣ್ಣ, ತಾಲೂಕು ಅಧ್ಯಕ್ಷ ಸಿ.ಜಗನ್ನಾಥ್, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಾಂತಕುಮಾರ್, ಕೆ.ಸಿ. ಮಂಜುನಾಥ್, ಪ್ರಸನ್ನಕುಮಾರ್, ಶ್ರೀನಿವಾಸ್, ಶ್ರೀಧರ್, ನಾಗೇಗೌಡ, ಎಸ್.ಆರ್.ರವಿಕುಮಾರ್, ಎಂ. ಮೂರ್ತಿ, ಶ್ರೀದೇವಿ, ಸ್ಥಳೀಯ ಸಂಸ್ಥೆಗಳ ಮುಖಂಡರು, ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.