ಬೆಂಗಳೂರು ನಗರ ಜಿಲ್ಲೆ: `ಪ್ರಜಾಪ್ರಭುತ್ವದಲ್ಲಿ ಜನರೇ ಪ್ರಭುಗಳು. ಅವರು ಕೇಳಿದ ಕೆಲಸ ಮಾಡಿಕೊಡಬೇಕು, ವಿಳಂಬ ಮಾಡಬೇಡಿ’ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅಧಿಕಾರಿಗಳಿಗೆ ಸೂಚಿಸಿದರು.
ಕ್ಷೇತ್ರದ ಕಾಡುಗೊಂಡನಹಳ್ಳಿ (ಕೆ.ಜಿ.ಹಳ್ಳಿ) ವ್ಯಾಪ್ತಿಯಲ್ಲಿ ಗುರುವಾರ ಸಂಚರಿಸಿ ಸ್ಥಳೀಯ ಜನರ ಸಮಸ್ಯೆಗಳನ್ನು ಆಲಿಸಿದ ಸಚಿವರು, ಅಭಿವೃದ್ದಿ ಕಾಮಗಾರಿಗಳ ಮಂದಗತಿಗೆ ಕಾರಣರಾದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಕೆ.ಜಿ.ಹಳ್ಳಿಯ ಪಿಳ್ಳಣ್ಣ ಗಾರ್ಡನ್ನಿಂದ ಶುರುವಾದ ಕ್ಷೇತ್ರ ಪರ್ಯಟನೆ ವಿನೋಬಾ ನಗರ, ಭಾರತ್ ಮಾತಾ ಬಡಾವಣೆ, ವೆಂಕಟೇಶಪುರ, ರಷದ್ ನಗರ ಹಾಗೂ ನಾಗವಾರ ಮುಖ್ಯರಸ್ತೆಯ ಮೆಟ್ರೋ ನಿಲ್ದಾಣದ ಬಳಿ ಕೊನೆಗೊಂಡಿತು.
ಪಿಳ್ಳಣ್ಣ ಗಾರ್ಡನ್ನ ಐದು ಬ್ಲಾಕ್ಗಳಲ್ಲಿ ಕಾಲ್ನಡಿಗೆಯಲ್ಲೇ ಸಂಚರಿಸಿದ ಸಚಿವ ಕೆ.ಜೆ.ಜಾರ್ಜ್ ಅವರು, ಕೊಳಗೇರಿ ಅಭಿವೃದ್ಧಿ ಮಂಡಳಿ ಮನೆಗಳ ನವೀಕರಣ ಹಾಗೂ ಶುದ್ದ ಕುಡಿಯುವ ನೀರಿಗೆ ಸಂಬAಧಿಸಿದ ಸಮಸ್ಯೆಗಳನ್ನು ಆಲಿಸಿದರು. ವಿನೋಬಾ ನಗರ, ಭಾರತ್ ಮಾತಾ ಬಡಾವಣೆಯಲ್ಲೂ ಸ್ಥಳೀಯರು ನೀರಿನ ಸಮಸ್ಯೆ ಬಗೆಹರಿಸುವಂತೆ ಕೋರಿದರು. ಈ ವೇಳೆ ಸ್ಥಳದಲ್ಲೇ ಹಾಜರಿದ್ದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳನ್ನು ಕರೆಸಿದ ಸಚಿವರು, ನೀವು ಸಬೂಬು ಹೇಳಬೇಡಿ. ಯಾವಾಗ ಶುದ್ದ ಕುಡಿಯುವ ನೀರಿನ ಸಂಪರ್ಕ ಕೊಡುತ್ತೀರಿ ದಿನಾಂಕ ಸಹಿತ ಹೇಳಿ. ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಹಿಳೆಯರಿಗೆ ಸ್ವಾವಲಂಬನೆಯೇ ಗುರಿಯಾಗಲಿ: ಕೆ.ಜಿ.ಹಳ್ಳಿಯಲ್ಲಿ ಯುನೈಟೆಡ್-ವೇ ಬೆಂಗಳೂರು ಸಹಯೋಗದಲ್ಲಿ ಮೈತ್ರಿ ಸರ್ವ ಸೇವಾ ಸಮಿತಿ ನಡೆಸಿದ ಟೈಲರಿಂಗ್ ಕೌಶಲ್ಯ ತರಬೇತಿ ಮುಗಿಸಿದ ೫೦ ಮಹಿಳೆಯರಿಗೆ ಹೊಲಿಗೆ ಯಂತ್ರ ಹಾಗೂ ಕೋರ್ಸ್ ಮುಗಿಸಿದವರಿಗೆ ಸಚಿವ ಕೆ.ಜೆ.ಜಾರ್ಜ್ ಪ್ರಮಾಣ ಪತ್ರಗಳನ್ನು ವಿತರಿಸಿದರು. ಅಲ್ಲದೆ, ಕೌಶಲ್ಯ ತರಬೇತಿ ಕುರಿತು ಹರ್ಷ ವ್ಯಕ್ತಪಡಿಸಿ, `ಮಹಿಳೆಯರು ಸ್ವಂತ ಉದ್ಯೋಗ ಮಾಡುತ್ತಾ ಸ್ವಾವಲಂಬಿಗಳಾದರೆ ಕುಟುಂಬ ಏಳಿಗೆ ಆಗುತ್ತದೆ. ಇದೇ ಯಶಸ್ಸಿನ ಗುಟ್ಟು,” ಎಂದು ಹೇಳಿ ತರಬೇತಿ ಪಡೆದವರಿಗೆ ಶುಭ ಹಾರೈಸಿದರು.
ಶಾಲೆಯ ಹೊಸ ಕಟ್ಟಡ ನಿರ್ಮಾಣಕ್ಕೆ ೯೦ ಲಕ್ಷ ಅನುದಾನ: ವಿನೋಬಾ ನಗರದ ವೆಂಕಟೇಶಪುರದಲ್ಲಿನ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿAದ ಏಳನೇ ತರಗತಿವರೆಗೂ ಓದುತ್ತಿರುವ ೧೭೦ ಮಕ್ಕಳು, ಶಾಲೆ ಹಾಗೂ ಪಕ್ಕದ ಮಸೀದಿಯಲ್ಲೂ ಪಾಠ ಕೇಳುತ್ತಿದ್ದಾರೆ ಎಂಬ ವಿಚಾರ ತಿಳಿದ ಸಚಿವ ಜಾರ್ಜ್ ಅವರು, ಶಾಲೆಗೆ ಹೊಸ ಕಟ್ಟಡದ ಅವಶ್ಯಕತೆ ಇರುವುದನ್ನು ಮನಗಂಡು, ಶೀಘ್ರವೇ ಶಾಲಾ ಕಟ್ಟದ ನಿರ್ಮಾಣಕ್ಕೆ ಸೂಚನೆ ನೀಡಿದರು. ಅಲ್ಲದೆ, ಶಾಲಾ ಕಟ್ಟಡ ನಿರ್ಮಾಣಕ್ಕೆ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ೯೦ ಲಕ್ಷ ರೂ. ಒದಗಿಸುವುದಾಗಿ ಘೋಷಿಸಿದರು.
ಎಂಬೆಸ್ಸಿ ಗಾಲ್ಫ್ ಲಿಂಕ್ಸ್ ಬಿಸಿನೆಸ್ ಪಾರ್ಕ್ನ ಸಿಎಸ್ಆರ್ ಅನುದಾನದಲ್ಲಿ ನಡೆಯುತ್ತಿರುವ ಭಾರತ್ ಮಾತಾ ಬಡಾವಣೆಯಲ್ಲಿನ ಅಂಗನವಾಡಿ ಕೇಂದ್ರಕ್ಕೆ ತೆರಳಿ ಪುಟ್ಟಮಕ್ಕಳಿಗೆ ಯಾವುದೇ ಸಮಸ್ಯೆಯಾಗದಂತೆ ನಡೆಸಲು ಅಗತ್ಯವಿರುವ ನೆರವು ನೀಡುವುದಾಗಿ ಭರವಸೆ ನೀಡಿದರು.
ಮೆಟ್ರೋ ನಿಲ್ದಾಣ ಕಾಮಗಾರಿ ವೇಗಕ್ಕೂ ಸೂಚನೆ: “ನಾನು ಬೆಂಗಳೂರು ಅಭಿವೃದ್ದಿ ಮಂತ್ರಿಯಾಗಿದ್ದಾಗ ಆರು ಎಕರೆ ಜಾಗ ನೀಡಿದ್ದೇನೆ. ಇಲ್ಲಿ ಸುಸಜ್ಜಿತ ಮೆಟ್ರೋ ನಿಲ್ದಾಣ ನಿರ್ಮಾಣವಾಗಬೇಕು ಸ್ಥಳೀಯ ಜನರಿಗೆ ಅನುಕೂಲ ಆಗಬೇಕು. ಇದೇ ನಮ್ಮ ಉದ್ದೇಶ. ಈಗ ಕ್ಷೇತ್ರದ ವೆಂಕಟೇಶಪುರ ಬಳಿ ಹಾಗೂ ನಾಗವಾರ ಮೆಟ್ರೋ ನಿಲ್ದಾಣಗಳ ಬಳಿ ನಡೆಯುತ್ತಿರುವ ರಸ್ತೆ, ಮಳೆ ನೀರಿನ ಚರಂಡಿ ಹಾಗೂ ಒಳಚರಂಡಿ ಕಾಮಗಾರಿಗಳನ್ನು ವೇಗವಾಗಿ ಮುಗಿಸಬೇಕು ಎಂದು ಸೂಚನೆ ನೀಡಿದರು.
ಮೆಟ್ರೋ ಕಾಮಗಾರಿಯಿಂದ ಹಾನಿಗೀಡಾದ ಮೂಲಸೌಕರ್ಯವನ್ನೂ ಸರಿಪಡಿಸುವಂತೆ ಸೂಚಿಸಿದ ಸಚಿವರು, ಕ್ಷೇತ್ರದ ರಸ್ತೆಗಳ ವೈಟ್ ಟಾಪಿಂಗ್ ಕಾಮಗಾರಿಯ ಮಾಹಿತಿ ಪಡೆದುಕೊಂಡು ಆದಷ್ಟು ಬೇಗ ಗುಣಮಟ್ಟದ ರಸ್ತೆ ಮಾಡುವಂತೆ ತಾಕೀತು ಮಾಡಿದರು. ಈ ವೇಳೆ ವಾರ್ಡ್ ಅಧ್ಯಕ್ಷರುಗಳು ಮತ್ತು ಜಿಬಿಎ, ಬಿಡಬ್ಲೂ÷್ಯಎಸ್ಎಸ್ಬಿ, ಬೆಸ್ಕಾಂ, ಕೆಪಿಟಿಸಿಎಲ್ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕೆ.ಜಿ.ಹಳ್ಳಿಗೆ ಮೂಲಸೌಕರ್ಯ, ಸಮಸ್ಯೆಗಳ ಪರಿಹಾರಕ್ಕೆ ಸಚಿವ ಕೆ.ಜೆ.ಜಾರ್ಜ್ ಸೂಚನೆ



