ಮೈಸೂರು: ತಿ.ನರಸೀಪುರ ತಾಲ್ಲೂಕಿನ ಕುರುಬೂರು ಬಳಿ ಭೀಕರ ಅಪಘಾತ ಸಂಬಂಧ ನಗರದ ಕೆ.ಆರ್ ಹಾಗೂ ಚೆಲುವಾಂಬ ಆಸ್ಪತ್ರೆಗೆ ಸೋಮವಾರ ಸಂಜೆ ಭೇಟಿ ನೀಡಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಹೆಚ್. ಸಿ.ಮಹಾದೇವಪ್ಪ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಚಿವ ಬಿ.ನಾಗೇಂದ್ರ ದಾಖಲಾಗಿರುವ ಗಾಯಾಳುಗಳ ಯೋಗ ಕ್ಷೇಮ ವಿಚಾರಿಸಿದರು.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಹೆಚ್.ಸಿ. ಮಹಾದೇವಪ್ಪ, ಹತ್ತು ಮಂದಿ ಮೃತಪಟ್ಟಿರುವುದು ಮನಸ್ಸಿಗೆ ನೋವಾಗಿದೆ. ಈಗಾಗಲೇ ಸರ್ಕಾರದಿಂದ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಮಾನವೀಯ ದೃಷ್ಟಿಕೋನಯಿಂದ ಆರ್ಥಿಕ ಸಹಕಾರಕ್ಕಾಗಿ ಪರಿಹಾರ ನೀಡುತ್ತಿದ್ದೇವೆ. ವೈದ್ಯರು ವಿಶೇಷ ಕಾಳಜಿವಹಿಸಿ ಚಿಕಿತ್ಸೆ ನೀಡುತ್ತಿದ್ದಾರೆ.
ಮೃತದೇಹಗಳ ಮರಣೋತರ ಪರೀಕ್ಷೆ ನಡೆಸಿದ ಬಳಿಕ ಬಳ್ಳಾರಿಗೆ ರವಾನಿಸಲಾಗುವುದು. ರಸ್ತೆ ಅಪಘಾತ ತಪ್ಪಿಸುವ ಬಗ್ಗೆಯೂ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸುತ್ತೇನೆ ಎಂದರು. ಬಳಿಕ ಸ್ಥಳದಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು.
ಮೂವರನ್ನು ಉಳಿಸುವ ಪ್ರಯತ್ನ: ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಚಿವ ಬಿ.ನಾಗೇಂದ್ರ ಮಾತನಾಡಿ, ಆಸ್ಪತ್ರೆಯಲ್ಲಿ ದಾಖಲಾಗಿರುವ ಮೂವರ ಉಳಿಸಿಕೊಳ್ಳುವ ಪ್ರಯತ್ನವನ್ನು ವೈದ್ಯರು ಮಾಡುತ್ತಿದ್ದಾರೆ. ನಮ್ಮ ಕ್ಷೇತ್ರದವರೇ ಆಗಿರುವ ಕುಟುಂಬಸ್ಥರೊಂದಿಗೆ ಮಾತನಾಡಿದ್ದೇನೆ ಈ ಕುಟುಂಬದವರು ಸಮಾರಂಭಗಳಲ್ಲಿ ರೊಟ್ಟಿ ತಯಾರಿಸುವ ವೃತ್ತಿ ಮಾಡುತ್ತಿದ್ದು, ವೈಯಕ್ತಿಕವಾಗಿ ನನಗೆ ಪರಿಚಯವಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನಮ್ಮೊಂದಿಗಿದ್ದರು.
ಈ ದುರ್ಘಟನೆಯಿಂದ ಮನಸ್ಸಿಗೆ ಬಹಳಷ್ಟು ನೋವಾಗಿದೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ನಾಲ್ಕು ವರ್ಷದ ಪುನೀತ್ ತಂದೆಯನ್ನು ಕಳೆದುಕೊಂಡಿದ್ದಾನೆ. ಅವನ ಭವಿಷ್ಯದ್ದು ಚಿಂತೆಯಾಗಿದೆ. ಮೃತದೇಹಗಳನ್ನು ಬಳಾರಿಗೆ ರವಾನಿಸುವ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ, ಸೂಕ್ತ ವ್ಯವಸ್ಥೆ ಕಲಿಸುತ್ತೇನೆ. ಅಂತ್ಯಕ್ರಿಯೆ ಯಲ್ಲಿ ಭಾಗಿಯಾಗುತ್ತೇನೆ, ಸರ್ಕಾರದ ಜೊತೆಗೆ ವೈಯಕ್ತಿಕವಾಗಿ ಅವರ ಕಷ್ಟಕ್ಕೆ ಸಂದಿಸುತ್ತೇನೆ ಎಂದು ಹೇಳಿದರು.
ಅಧಿಕಾರಿಗಳ ಭೇಟಿ ಪರಿಶೀಲನೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪ್ರಸಾದ್ ಸೇರಿದಂತೆ ಹಲವು ಅಧಿಕಾರಿಗಳು ಕೆ.ಆರ್. ಆಸ್ಪತ್ರೆ ಹಾಗೂ ಚೆಲುವಾಂಬ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಮಾಹಿತಿ ಪಡೆದು ಸೂಕ್ತ ಚಿಕಿತ್ಸೆಗೆ ಅವಕಾಶ ಮಾಡಿಕೊಡುವಂತೆ ಆಸ್ಪತ್ರೆ ವೈದ್ಯರು, ಸಿಬ್ಬಂದಿಗಳಿಗೆ ಸೂಚಿಸಿದರಲ್ಲದೆ ಚಿಕಿತ್ಸೆ ಕುರಿತು ಮಾಹಿತಿ ಪಡೆದುಕೊಂಡರು.
Leave a Review