ಕೆ.ಆರ್.ಪೇಟೆ: ಸಚಿವ ನಾರಾಯಣಗೌಡ ಕಿಕ್ಕೇರಿ ಹೋಬಳಿಯ ಸಾಸಲು, ಐಕನಹಳ್ಳಿ, ಐನೋರಹಳ್ಳಿ, ದೇವರಹಳ್ಳಿ, ಶೀಳನೆರೆ ಹೋಬಳಿಯ ಹೆಮ್ಮನಹಳ್ಳಿ, ಹೊನ್ನೇನಹಳ್ಳಿ, ಮುರುಕನಹಳ್ಳಿ, ನಾಡಬೋಗನಹಳ್ಳಿ, ಹಾಗೂ ಮೊಸಳೆಕೊಪ್ಪಲು ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ ಪಟ್ಟಣದ ಅಭಿವೃದ್ಧಿಗೆ ನೂರು ಕೋಟಿ ರೂ. ವಿಶೇಷ ಅನುಧಾನವನ್ನು ಬಿಡುಗಡೆ ಮಾಡಿಸಿ ಪುರಸಭಾ ವ್ಯಾಪ್ತಿಯ ಎಲ್ಲಾ ಬಡಾವಣೆಗಳಲ್ಲಿ ಅಭಿವೃದ್ದಿ ಕೆಲಸ ಕಾರ್ಯಗಳನ್ನು ಅನುಷ್ಠಾನಗೊಳ್ಳುತ್ತಿವೆ. ಕಳೆದ 20 ವರ್ಷಗಳಿಂದ ಲೋಕಾಯುಕ್ತದಲ್ಲಿದ್ದ ಹೇಮಾವತಿ ಬಡಾವಣೆಯ ನಿವೇಶನಗಳ ಹಗರಣವನ್ನು ಸುಖಾಂತ್ಯಗೊಳಿಸಿ ಬಡಾವಣೆಯಲ್ಲಿ ವಾಸವಿರುವ ಅಧಿಕೃತ ವ್ಯಕ್ತಿಗಳ ಹೆಸರಿಗೆ ಖಾತೆ ಮಾಡಿಸಿಕೊಡುವ ಐತಿಹಾಸಿಕ ಕೆಲಸವನ್ನು ಮಾಡಲಾಗಿದೆ.
ತಾಲ್ಲೂಕಿನ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಸಂವರ್ಧನೆಗಾಗಿ 30 ಕೋಟಿ ರೂ. ವೆಚ್ಚದಲ್ಲಿ ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ತಾಯಿಮಗು ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಯುವ ಜನರ ಕ್ರೀಡಾ ಚಟುವಟಿಕೆಗಳಿಗೆ ಅನುಕೂಲವಾಗುವಂತೆ 15 ಕೋಟಿ ರೂ. ವೆಚ್ಚದಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಒಳಾಂಗಣ ಕ್ರೀಡಾಂಗಣವು ನಿರ್ಮಾಣವಾಗಿ ಲೋಕಾರ್ಪಣೆಯಾಗಿದ್ದು, ಸಾವಿರಾರು ಯುವಕ ಯುವತಿಯರು ಈ ಒಳಾಂಗಣ ಕ್ರೀಡಾಂಗಣದಿಂದಾಗಿ ಕ್ರೀಡಾ ಚಟುವಟಿಕೆಗಳಲ್ಲಿ ತರಬೇತಿ ಪಡೆದು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲು ಅನುಕೂಲವಾಗಿದೆ.
ಪಟ್ಟಣದ ದೇವೀರಮ್ಮಣ್ಣಿ ಕೆರೆ ಹಾಗೂ ಹೊಸಹೊಳಲು ಗ್ರಾಮದ ಚಿಕ್ಕಕೆರೆಯು ತಲಾ 10 ಕೋಟಿ ರೂ. ವೆಚ್ಚದಲ್ಲಿ ಸಮಗ್ರವಾಗಿ ಅಭಿವೃದ್ಧಿಯಾಗುತ್ತಿವೆ. ಇನ್ನು ಹೆಚ್ಚಿನ ಅಭಿವೃದ್ದಿ ಪಡಿಸಲು ಮತ್ತೊಂದು ಬಾರೀ ಅವಕಾಶ ನೀಡಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮೂಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಜಿ.ಪಂ.ಮಾಜಿ ಉಪಾಧ್ಯಕ್ಷರಾದ ಕಿಕ್ಕೇರಿ ಪ್ರಭಾಕರ್, ಶೀಳನೆರೆ ಅಂಬರೀಷ್, ತಾ.ಪಂ ಮಾಜಿ ಸದಸ್ಯ ರಾಜಾಹುಲಿ ದಿನೇಶ್, ಪುರಸಭಾ ಸದಸ್ಯರಾದ ಕೆ.ಎಸ್.ಸಂತೋಷ್‍ಕುಮಾರ್, ಕೆ.ಎಸ್.ಪ್ರಮೋದ್, ಹೆಚ್.ಆರ್.ಲೋಕೇಶ್, ಮಾಜಿ ಸದಸ್ಯ ಕೆ.ವಿನೋದ್‍ಕುಮಾರ್, ಭಾರತೀಪುರ ಗ್ರಾ.ಪಂ ಉಪಾಧ್ಯಕ್ಷ ಬೆದಹಳ್ಳಿ ಸುನೀಲ್, ಚಂದ್ರಕಲಾರಮೇಶ್, ಮತ್ತಿತರರು ಉಪಸ್ಥಿತರಿದ್ದರು.
Leave a Review