ಹೊಸಕೋಟೆ: ತಾಲೂಕಿನ ಅನುಗೊಂಡನಹಳ್ಳಿ ಹೋಬಳಿ ತಿರುಮಲಶೆಟ್ಟಿಹಳ್ಳಿ ಬಳಿಯ ಎಸ್ಪಿಜಿ ಆಸ್ಪತ್ರೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ಪತ್ತೆ ಆಗಿ, ದಾಳಿ ವೇಳೆ ನಾಪತ್ತೆಯಾಗಿದ್ದ ಆಸ್ಪತ್ರೆ ವೈದ್ಯ ಡಾ.ಶ್ರೀನಿವಾಸ್ನನ್ನು ತಿರುಮಲಶೆಟ್ಟಿಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತೀವ್ರ ಸದ್ದು ಮಾಡಿದ್ದ ಹೆಣ್ಣು ಭ್ರೂಣ ಹತ್ಯೆ ಪ್ರಕರಣದಲ್ಲಿ ವೈದ್ಯ ಶ್ರೀನಿವಾಸ್ ಸ್ಭೆರಿದಂತೆ ಒಟ್ಟು 5 ಜನರ ಮೇಲೆ ಪ್ರಕರಣ ದಾಖಲಾಗಿತ್ತು. ನಾಲ್ವರನ್ನು ವಶಕ್ಕೆ ಪಡೆದಿದ್ದ ಪೊಲೀಸರು ತೀವ್ರ ವಿಚಾರಣೆ ನಡೆಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಇನ್ನು ತಲೆಮರೆಸಿಕೊಂಡಿದ್ದ ಪ್ರಕರಣದ ಪ್ರಮುಖ ಆರೋಪಿ ಡಾ.ಶ್ರೀನಿವಾಸ್ ಬಂಧನಕ್ಕೆ ತಿರುಮಲಶೆಟ್ಟಿಹಳ್ಳಿ ಪೊಲೀಸರು ಮೂರು ಪ್ರತ್ಯೇಕ ತಂಡಗಳನ್ನು ರಚನೆ ಮಾಡಿದ್ದರು.
ಶನಿವಾರ ಸಂಜೆ ವೈಟ್ಫೀಲ್ಡ್ ಬಳಿ ಇರುವ ಚನ್ನಸಂದ್ರದ ಬಳಿ ಕಾರಿನಲ್ಲಿ ಬೆಂಗಳೂರಿನ ಕಡೆಗೆ ತೆರಳುತ್ತಿದ್ದಾಗ ವೈದ್ಯ ಶ್ರೀನಿವಾಸ್ನ್ನು ಪೊಲೀಸರು ಬಂಧಿಸಿದ್ದಾರೆ.ಸಂಪೂರ್ಣ ವಿಚಾರಣೆ ನಂತರ ಹೆಣ್ಣು ಭ್ರೂಣ ಹತ್ಯೆಯ ಮತ್ತಷ್ಟು ವಿಷಯಗಳು ಹೊರಬರಲಿದೆ. 12 ದಿನಗಳ ಕಾಲ ಪೊಲೀಸರ ಸುಫರ್ದಿಗೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಲಿದ್ದಾರೆ.