This is the title of the web page
This is the title of the web page

ಬಂಜಾರ ಸಮಾಜಕ್ಕೆ ಸಂತ ಸೇವಾಲಾಲ್ ಉತ್ತಮ ಮಾರ್ಗ ತೋರಿಸಿದ್ದಾರೆ: ಶಾಸಕ ಲಿಂಗೇಶ್

ಬೇಲೂರು: ಬಸವಾದಿ ಶರಣರು ಹಾಗೂ ದಾಸಶ್ರೇಷ್ಟರ ರೀತಿಯಲ್ಲಿ ಸಂತ ಸೇವಾಲಾಲ್ ಕೂಡ ತುಳಿತಕ್ಕೊಳಗಾದ ಬಂಜಾರ ಸಮಾಜಕ್ಕೆ ಉತ್ತಮ ಮಾರ್ಗ ತೋರಿಸಿದ್ದಾರೆ ಎಂದು ಶಾಸಕ ಕೆ ಎಸ್ ಲಿಂಗೇಶ್ ತಿಳಿಸಿದರು ಜಾವಗಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಹಾಸನ ಹಾಗೂ ಬೇಲೂರು ಸಂಘದ ವತಿಯಿಂದ ಆಯೋಜಿಸಲಾಗಿದ್ದ ಸಂತ ಸೇವಾಲಾಲರ 284 ನೇ ಜಯಂತಿ ಹಾಗೂ “ಬಂಜಾರ ಜನಜಾಗೃತಿ ಸಮಾವೇಶ”ವನ್ನು ದೀಪ ಬೆಳಗಿಸಿ ಹಾಗೂ ನಗಾರಿ ಬಾರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಬಂಜಾರ ಸಮಾಜಕ್ಕೆ ಸಂತ ಸೇವಾಲಾಲರ ಕೊಡುಗೆ ಅಪಾರವಾಗಿದ್ದು ಅವರು ಮೂಡಿಸಿದ ಜಾಗೃತಿಯ ಫಲವಾಗಿ ಬಂಜಾರ ಜನಾಂಗವು ಸಮಾಜದ ಮುಖ್ಯ ವಾಹಿನಿಗೆ ಸೇರುವಂತಾಗಿದೆ ಪ್ರಸ್ತುತ ಎಲ್ಲಾ ಸರ್ಕಾರಗಳು ಸೇವಾಲಾಲರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸುವುದರ ಜೊತೆಗೆ ‘ತಾಂಡಾ ಅಭಿವೃದ್ಧಿ ನಿಗಮ’ವನ್ನು ಸ್ಥಾಪಿಸಿ ಗಂಗಾಕಲ್ಯಾಣ, ಉದ್ಯೋಗಿನಿ, ನೇರಸಾಲ ಹೀಗೆ ಮೊದಲಾದ ಸೌಲಭ್ಯಗಳನ್ನು ಕಲ್ಪಿಸಿ ಕೊಡುತ್ತಿದೆ ಎಂದು ತಿಳಿಸಿದರು.

ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ತಾಲೂಕು ಅಧ್ಯಕ್ಷರಾದ ಶ್ರೀ ಚಂದ್ರನಾಯಕ್ ರವರು ಮಾತನಾಡುತ್ತಾ ನಮ್ಮ ಬಂಜಾರ ಸಂಸ್ಕೃತಿಯು ಸಿಂಧೂನದಿ ನಾಗರಿಕತೆಯ ಹರಪ್ಪ ಮಹೆಂಜೋದಾರೋ ಕಾಲದ ಸಂಸ್ಕೃತಿಯಾಗಿದ್ದು ಆಗಿನಿಂದಲೂ ಗುಡ್ಡ-ಗವಿ ಕಾಡುಮೇಡುಗಳಲ್ಲಿ ವಾಸಿಸುತ್ತಾ, ಆಧುನಿಕತೆಯಿಂದ ದೂರವಿದ್ದ ಸಮಾಜದಲ್ಲಿ ಕೇವಲ 300 ವರ್ಷಗಳ ಹಿಂದೆಯಿಂದಷ್ಟೇ ಶ್ರೀ ಸೇವಾಲಾಲ್ ರವರಿಂದ ಬೆಳಕಿಗೆ ಬಂದಿದೆ ಎಂದರು.

ಕಾಂಗ್ರೆಸ್ ಮುಖಂಡ ಗ್ರಾನೈಟ್ ರಾಜಶೇಖರ್ ಮಾತನಾಡಿ ಬಸವ, ಬುದ್ಧ ಅಂಬೇಡ್ಕರ್ ಅವರ ರೀತಿ ಬಂಜಾರ ಸಮಾಜದ ಅಭಿವೃದ್ಧಿಗಾಗಿ ದುಡಿದವರಲ್ಲಿ ಸಂತ ಸೇವಾಲಾಲ್ ಮಹಾರಾಜರು ಕೂಡ ಒಬ್ಬರಾಗಿದ್ದು ಇವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ ಎಂದು ಅವರು ತಿಳಿಸಿದರು.

ಸಂತ ಸೇವಾಲಾಲರ ಭಾವಚಿತ್ರವನ್ನು ಬೆಳ್ಳಿರಥದ ಮೇಲೆ ಇರಿಸಿ ಚಾಲನೆ ನೀಡಿದ ಕಾಂಗ್ರೆಸ್ ಮುಖಂಡ ಸಮಾಜಕ್ಕೆ ಶ್ರೀ ಶಿವರಾಂ ಹಾರೈಸಿದರು. ಬಂಜಾರ ಸಮುದಾಯದ ಸಾಂಪ್ರದಾಯಿಕ ಉಡುಗೆ ತೊಡಗೆಯಲ್ಲಿ ರುದ್ರಾಕ್ಷಿಬಾಯಿ ಕಲಾ ತಂಡದಿಂದ ನೃತ್ಯ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಬೆಳ್ಳಿ ರಥದಲ್ಲಿ ಸೇವಾಲಾಲ್ ರವರ ವೇಶಧಾರಿಯಾಗಿ ಬೇಲೂರಿನ ಸಮಾಜ ಸೇವಕ ಹಾಗೂ ಎ.ಐ.ಬಿ.ಎಸ್.ಎಸ್ ಜಿಲ್ಲಾಮಾಧ್ಯಮ ಕಾರ್ಯದರ್ಶಿಯಾದ ಶ್ರೀ ಸುರೇಶ್ ಅ.ಭೀ ರವರು ಗಮನ ಸೆಳೆದರು. ಬಂಜಾರ ಸಮುದಾಯದಲ್ಲಿ ಸೇವೆ ಸಲ್ಲಿಸಿದ ರಾಜಮಲ್ ನಾಯಕ್ ಹಾಗೂ ಚಂದ್ರನಾಯಕ್ ಅವರಿಗೆ ಈ ಸಂದರ್ಭದಲ್ಲಿ “ಬಂಜಾರ ಸೇವಾ ರತ್ನ” ಪ್ರಶಸ್ತಿಯನ್ನು ವಿತರಿಸಲಾಯಿತು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹೆಚ್ ಕೆ ಸುರೇಶ್, ಎಐಬಿಎಸ್‍ಎಸ್ ರಾಜ್ಯ ಘಟಕದ ಅಧ್ಯಕ್ಷ ಪಾಂಡುರಂಗ ಪಮ್ಮಾರ್ ಹಾಗೂ ರಾಜ್ಯ ಕಾರ್ಯಾಧ್ಯಕ್ಷ ಪುಟ್ಟಾನಾಯಕ್, ಯುವ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ವಿಜಯ ಜಾದವ್, ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗೋವಿಂದ ನಾಯಕ್, ಜಾವಗಲ್ ಪಿ ಎಸ್ ಮಂಜುನಾಥ್ ಬಾಣವರ ಪಿಎಸ್‍ಐ ಅಭಿಜಿತ್, ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾಕ್ಟರ್ ಆನಂದ್ ನಾಯಕ್, ಗ್ರಾಮ ಪಂಚಾಯತಿ ಅಧ್ಯಕ್ಷ ಮಮತಾ ಮಹಿಳಾ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಶೈಲಾಬಾಯಿ, ಜಿಲ್ಲಾ ಮತ್ತು ತಾಲೂಕು ಬಂಜಾರ ಸೇವಾ ಸಮುದಾಯದ ಮುಖಂಡರುಗಳು ಇದ್ದರು.

ಇದೇ ಸಂದರ್ಭದಲ್ಲಿ ಎ ಐ ಬಿ ಎಸ್ ಎಸ್ ತಾಲೂಕು ಅದ್ಯಕ್ಷರಾದ ಶ್ರೀ ಚಂದ್ರಾನಾಯಕ್ ರವರಿಗೆ “ಬಂಜಾರ ಸೇವಾರತ್ನ” ಬಿರುದು ನೀಡಿ ಸನ್ಮಾನಿಸಲಾಯಿತು.