ಹನೂರು: ಅತಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಶ್ರಿತ ಕೃಷಿಯನ್ನು ನಂಬಿ ಬದುಕುತ್ತಿರುವ ರೈತರ ಜೀವನಕ್ಕೆ ನೆರವಾಗುವ ರಾಮನ ಗುಡ್ಡೆ ಕೆರೆಗೆ ನೀರು ತರುತ್ತಿರುವುದು ರೈತರು ಆರ್ಥಿಕವಾಗಿ ಸಬಲರಾಗಲು ಅನುಕೂಲ ಆಗಲಿದೆ ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.
ತಾಲ್ಲೂಕಿನ ರಾಮನ ಗುಡ್ಡೆ ಕೆರೆಗೆ ಕಾವೇರಿ ನದಿ ನೀರನ್ನು ಹಳ್ಳದ ಮೂಲಕ ನೀರು ತುಂಬಿಸುವ ಕಾರ್ಯಕ್ಕೆ ಪೂಜೆ ಸಲ್ಲಿಸಿ, ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಲಾಶಯಗಳಿಗೆ ಕಾವೇರಿ ನದಿ ನೀರು ತುಂಬಿಸುವ ಮೂಲಕ ರೈತರ ಬಾಡಿಗೆ ನೆರವಾಗಬೇಕೆಂಬುದು ನನ್ನ ವಯಕ್ತಿಕ ಉದ್ದೇಶ. ರೈತನಿಗೆ ಬಹಳ ಮುಖ್ಯವಾಗಿ ನೀರು ವಿದ್ಯುತ್ ಕೊಟ್ಟರೆ ಬೇರೆನನ್ನು ಕೇಳುವುದಿಲ್ಲ. ಆ ನಿಟ್ಟಿನಲ್ಲಿ ಈಗಾಗಲೇ ಗುಂಡಾಲ್ ಜಲಾಶಯ ಭರ್ತಿಯಾಗಿದೆ ಅದರ ಅಚ್ಚುಕಟ್ಟ ಪ್ರದೇಶದಲ್ಲಿ ರೈತರು ವ್ಯವಸಾಯವನ್ನು ಮಾಡುತ್ತಿದ್ದಾರೆ. ಅದರಂತೆಯೇ ರಾಮನ ಗುಡ್ಡೆ ಕೆರೆಗೆ ಕಾವೇರಿ ನದಿ ಮೂಲದಿಂದ ನೀರು ಹರಿದು ಬರುತ್ತಿದ್ದು ಈ ಭಾಗದ ಸುಮಾರು ೬೧೫ಕ್ಕೂ ಹೆಚ್ಚು ಎಕರೆಗೆ ನೀರು ಉಣಿಸಿದಂತಾಗುತ್ತದೆ.
ಆ ನಿಟ್ಟಿನಲ್ಲಿ ಮುಂದುವರೆದ ಭಾಗವಾಗಿ ಹುಬ್ಬೆ ಹುಣಸೆ ಜಲಾಶಯಕ್ಕೆ ಹಾಗೂ ಉಡುತೋರೆ ಹಳ್ಳ ಜಲಾಶಯಕ್ಕೆ ಕಾವೇರಿ ನದಿ ಮೂಲದಿಂದ ನೀರು ಹರಿಸಲು ಸಾಕಷ್ಟು ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದು ಮುಂದಿನ ದಿನಗಳಲ್ಲಿ ಕಾವೇರಿ ನದಿ ನೀರು ತುಂಬಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅಲ್ಲದೆ ಈಗಾಗಲೇ ಶಾಸಕರ ಅನುದಾನದಡಿಯಲ್ಲಿ ಸುಮಾರು ನಾಲ್ಕು ಕೋಟಿ ಇರುವ ವೆಚ್ಚದಲ್ಲಿ ಬರುವಂತಹ ಕೆರೆಗಳ ಹೂಳು ತೆಗೆಸುವ ಕಾರ್ಯ ಮಾಡಲಾಗುತ್ತದೆ. ಅಲ್ಲದೆ ರಾಮಾಪುರ ಹೋಬಳಿ ವ್ಯಾಪ್ತಿಯಲ್ಲಿ ಹಾಗೂ ಮಾರ್ಟಳ್ಳಿ ವ್ಯಾಪ್ತಿಯಲ್ಲಿ ಸಹ ಕೆರೆಗಳಿಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಜೊತೆಗೆ ಮಿನ್ನತ್ತು ಹಳ್ಳ ಹಾಗೂ ಗೋಪಿನಾಥನ ಜಲಾಶಯಗಳಿಗೆ ನೀರು ತುಂಬಿಸಲು ಅಗತ್ಯ ಕ್ರಮವಿಸಲಾಗುವುದು. ಜೊತೆಗೆ ವಿದ್ಯುತ್ ಶಿಕ್ಷಣ ಆರೋಗ್ಯ ಹಾಗೂ ರಸ್ತೆಗೆ ಸಂಬಂಧಿಸಿದಂತೆ ಈಗಾಗಲೇ ಅಗತ್ಯ ಕ್ರಮವಿಸಲಾಗಿದೆ ಎಂದರು.
ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಮಹೇಶ್ ಮಾತನಾಡಿ, ರಾಮನಗುಡ್ಡೆ ಕೆರೆಗೆ ನದಿ ಮೂಲದಿಂದ ನೀರು ಬರುತ್ತಿರುವುದು ರೈತರಲ್ಲರಿಗೂ ಕೂಡ ಆನಂದ ಉಂಟು ಮಾಡಿದೆ. ಆದರೆ ಕಳೆದ ಮೂರು ತಿಂಗಳ ನಿರಂತರ ಪರಿಶ್ರಮದಿಂದ ನದಿ ಮೂಲದಿಂದ ನೀರು ತೆಗೆದುಕೊಂಡು ಬರಲಾಗುತ್ತಿದೆ. ಶಾಸಕರಾಗಿರಶ್ರಮ ಹಾಗೂ ಅಧಿಕಾರಿಗಳ ಶ್ರಮದ ಫಲವಾಗಿ ರಾಮನ ಗುಡ್ಡೆ ಕೆರೆಗೆ ನೀರು ತುಂಬುತ್ತಿದೆ. ರೈತರು ಇದರ ಸದುಪಯೋಗ ಪಡೆದುಕೊಂಡು ಪ್ರಶ್ನೆಗಳನ್ನು ಕೇಳುವ ಸಾಮರ್ಥ್ಯ ಬೆಳೆಸಿಕೊಂಡು ತಮ್ಮ ಜೀವನದಲ್ಲಿ ಆರ್ಥಿಕವಾಗಿ ಸದೃಢರಾಗಲು ಪ್ರಯತ್ನ ಮಾಡಬೇಕು ಎಂದರು.
ನೀರು ಬಳಕೆದಾರರ ಸಲಹಾ ಸಂಘ ಮಾಡಿಕೊಳ್ಳಿ: ಜಲಾಶಯಗಳಿಗೆ ನೀರು ತುಂಬಿದ ಬಳಿಕ ಅಥವಾ ಪ್ರಸ್ತುತ ದಿನಮಾನಗಳಲ್ಲಿ ರೈತರು ನೀರು ಬಳಕೆದಾರ ಸಲಹಾ ಸಮಿತಿ ಅಥವಾ ಸಂಘವನ್ನು ರಚನೆ ಮಾಡಿಕೊಂಡು ನೀರನ್ನು ಬಳಕೆ ಮಾಡುವಲ್ಲಿ ಮುತುವರ್ಜಿ ವಹಿಸಬೇಕು. ಇಲ್ಲವಾದಲ್ಲಿ ಗೊಂದಲಕೀಡು ಮಾಡುತ್ತದೆ ಹಾಗಾಗಿ ನೀರು ಬಳಕೆದಾರ ಸಲಹಾ ಸಂಘವನ್ನು ರಚನೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಹುಟ್ಟೂರಿಗೆ ಕಾರ್ಯ ಮಾಡುವ ಕೆಲಸ: ಹನೂರು ಮೂಲತಃ ನನ್ನ ಹುಟ್ಟೂರಾಗಿದ್ದು ನನ್ನ ಅವಧಿಯಲ್ಲಿ ನನ್ನ ಹುಟ್ಟೂರಿಗೆ ನದಿ ಮೂಲಗಳಿಂದ ನೀರು ತರಿಸುವಂತಹ ಕಾಯಕ ನನ್ನ ಮೇಲಿದೆ. ನಾನು ಸಹ ಪ್ರಾಮಾಣಿಕವಾಗಿ ನನ್ನ ಊರಿಗೆ ನನ್ನ ಜನರಿಗೆ ನೀರು ಕೊಡುವ ಹಂಬಲದಲ್ಲಿ ನಾನು ಕೂಡ ಇದ್ದೇನೆ. ನನ್ನ ಹುಟ್ಟೂರಿಗೆ ನನ್ನ ಜನಗಳಿಗೆ ಸಹಾಯ ಮಾಡುವ ಸೌಭಾಗ್ಯ ನನಗೆ ದೊರೆತಿರುವುದು ನನ್ನ ಪುಣ್ಯ ಎಂದು ಮಹೇಶ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಅಭಿಯಂತರುಗಳಾದ ರಘುಪತಿ, ಉಮೇಶ್, ಕರುಣಾಮಯಿ, ಬಸವೇಶ್, ಹಾಗೂ ಚಾಮುಲ್ ನಿರ್ದೇಶಕರಾದ ಉದ್ದನೂರು ಪ್ರಸಾದ್, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶಿವಮೂರ್ತಿ, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಮಂಜೇಶ್ ಗೌಡ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶಾಗ್ಯ ಬಾಬಣ್ಣ,ಶಾಗ್ಯ ರವಿ,ಮುಳ್ಳೂರು ಶಿವಮಲ್ಲು, ಕೆ ರಾಜುಗೌಡ, ಗುರುಮಲ್ಲಪ್ಪ,ಅಮೀನ್ ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮುಮ್ತಾಜ್ ಬಾನು, ವಿವಿಧ ಸಂಘಟನೆಗಳ ಮುಖ್ಯಸ್ಥರು, ರೈತರುಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ರಾಮನಗುಡ್ಡ ಕೆರೆಗೆ ನೀರು ತುಂಬಿಸುವ ಯೋಜನೆಗೆ ಶಾಸಕ ಎಂ.ಆರ್.ಮಂಜುನಾಥ್ ಚಾಲನೆ



