ಕೆಜಿಎಫ್: ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಮಳೆಯಿಂದ ಹಾನಿಗೊಳಗಾದ ರಸ್ತೆಗಳ ಅಭಿವೃದ್ಧಿಗೆ ಮಾನ್ಯ ಮುಖ್ಯಮಂತ್ರಿಗಳು 2024-25ನೇ ಸಾಲಿನಲ್ಲಿ ವಿಶೇಷವಾಗಿ 10 ಕೋಟಿ ರೂಪಾಯಿಗಳ ಅನುದಾನ ನೀಡಿದ್ದು, ಈ ಅನುದಾನದಲ್ಲಿ ಹಳ್ಳಿಯಿಂದ ಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಸಿ.ಸಿ. ರಸ್ತೆಗಳನ್ನಾಗಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕಿ ಎಂ.ರೂಪಕಲಾ ತಿಳಿಸಿದರು.ಪಟ್ಟಣದ ಸಮೀಪದ ಹುಲ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂಗಳ ಮುಖ್ಯ ರಸ್ತೆಯಿಂದ ಮಾರಸಂದ್ರ ಗ್ರಾಮಕ್ಕೆ ಹೋಗುವ ಅಂದಾಜು 44 ಲಕ್ಷ ರೂಪಾಯಿ ವೆಚ್ಚದ ರಸ್ತೆ ಕಾಮಗಾರಿ ಹಾಗೂ ರಾಮಸಾಗರ ಪಂಚಾಯತಿಯ ಮುಖ್ಯ ರಸ್ತೆಯಿಂದ ಕೆರೆ ಮಿಂಡಹಳ್ಳಿ ಗ್ರಾಮಕ್ಕೆ ಹೋಗುವ ಅಂದಾಜು 19 ಲಕ್ಷ ರೂಪಾಯಿ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು .ಮಾರಸಂದ್ರ ಗ್ರಾಮಸ್ಥರ ದೀರ್ಘಕಾಲದ ಬೇಡಿಕೆಯನ್ನು ಪರಿಗಣಿಸಿ, ಅನುದಾನದ ಲಭ್ಯತೆಗೆ ಅನುಗುಣವಾಗಿ ರಸ್ತೆ ಕಾಮಗಾರಿಗೆ ಅನುಮೋದನೆ ಕೊಡಿಸಲಾಗಿದೆ. ಮಾರಸಂದ್ರ ಗ್ರಾಮದಲ್ಲಿ ರಸ್ತೆ ಕಾಮಗಾರಿ, ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಹೈ ಮಾಸ್ಟ್ ದೀಪ ಸೇರಿದಂತೆ ಒಟ್ಟು 1.26 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.ಇದೇ ವೇಳೆ ಮಿಂಡಹಳ್ಳಿ ಗ್ರಾಮದ ರಸ್ತೆಯು ಮಣ್ಣಿನ ರಸ್ತೆಯಾಗಿದ್ದು, ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಬೇಡಿಕೆಯಂತೆ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದರು.ಕಾಮಗಾರಿಗಳ ಅಂದಾಜು ಮೊತ್ತದಲ್ಲಿ ವ್ಯತ್ಯಾಸ ಕಂಡುಬಂದರೂ ಸಹ, ಯಾವುದೇ ಕಾರಣಕ್ಕೂ ಕೆಲಸವನ್ನು ಅರ್ಧಕ್ಕೆ ನಿಲ್ಲಿಸದೆ ಸಂಪೂರ್ಣವಾಗಿ ರಸ್ತೆ ನಿರ್ಮಾಣ ಮಾಡಬೇಕು ಎಂದು ಶಾಸಕರು ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಅ.ಮು.ಲಕ್ಷ್ಮೀನಾರಾಯಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ್, ಗುತ್ತಿಗೆದಾರ ಅರವಿಂದ್, ಜಿಪಂ ಮಾಜಿ ಅಧ್ಯಕ್ಷರಾದ ಹಂಗಳ ರಮೇಶ್, ಚಂದ್ರಪ್ಪ, ಕಾರಿ ಪ್ರಸನ್ನ, ಪದ್ಮನಾಭ ರೆಡ್ಡಿ, ರಾಮಕೃಷ್ಣಪ್ಪ, ಚೆನ್ನಕೇಶವ ರೆಡ್ಡಿ, ನಾಗರಾಜ್ ರೆಡ್ಡಿ, ಮುನಿರೆಡ್ಡಿ, ಬಲರೆಡ್ಡಿ, ಭಟ್ರಕುಪ್ಪ ಕೃಷ್ಣ ರೆಡ್ಡಿ, ಗುಟ್ಟಹಳ್ಳಿ ಮಂಜುನಾಥ್ ರೆಡ್ಡಿ, ವಿಶ್ವನಾಥ್, ರಮೇಶ್, ರಾಜಣ್ಣ, ಆಂಜಪ್ಪ, ಮಹದೇವಪುರ ಹರೀಶ್, ವೆಂಕಟೇಶ್, ರವಣಪ್ಪ, ಆನಂದ್ ರೆಡ್ಡಿ, ಬ್ಯಾಟಪ್ಪ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಇದ್ದರು.



