ಪೀಣ್ಯ ದಾಸರಹಳ್ಳಿ: ದಾಸರಹಳ್ಳಿ ಕ್ಷೇತ್ರದ ವಸತಿ ಪ್ರದೇಶಗಳಲ್ಲಿ ನಾಗರಿಕರಿಗೆ ಕಿರಿಕಿರಿ ಉಂಟು ಮಾಡುವ ಕೈಗಾರಿಕೆಗಳು, ಗುಜರಿ ಅಂಗಡಿಗಳು ಸೇರಿದಂತೆ ಅನಧಿಕೃತ ವಾಣಿಜ್ಯ ಮಳಿಗೆಗಳನ್ನು ಕೂಡಲೇ ತೆರವುಗೊಳಿಸಬೇಕು’ ಎಂದು ಶಾಸಕ ಎಸ್. ಮುನಿರಾಜು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದರು.
ರಾಜಗೋಪಾಲನಗರ ವಾರ್ಡ್ ನಂ 70 ರ ಕೆಲವು ಪ್ರದೇಶಗಳಲ್ಲಿ ಬಿಬಿಎಂಪಿ,ಬಿಡಬ್ಲ್ಯು ಎಸ್ ಎಸ್ ಬಿ,ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದರು.‘ಇತ್ತೀಚಿಗೆ ಅನೇಕ ಕಡೆಗಳಲ್ಲಿ ಬೆಂಕಿ ಅವಘಡಗಳು ಸಂಭವಿಸುತ್ತಿರುವದರಿಂದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು.
ವಸತಿ ಪ್ರದೇಶಗಳಲ್ಲಿ ಯಾವುದೇ ಅನುಮತಿ ಪಡೆಯದೆ ಕೈಗಾರಿಕೆಗಳನ್ನು ನಡೆಸುತ್ತಿರುವುದರಿಂದ ನಾಗರಿಕರಿಗೆ ಶಬ್ದ ಮಾಲಿನ್ಯ, ವಾಯು ಮಾಲಿನ್ಯದ ಜೊತೆಗೆ ಸಂಚರಿಸಲೂ ತೊಂದರೆಗಳಾಗುತ್ತಿವೆ ಅದನ್ನು ತಪ್ಪಿಸಬೇಕಿದೆ’ ಎಂದು ಹೇಳಿದರು.ರಾಜಗೋಪಾಲನಗರ ವಾರ್ಡ್ ನಲ್ಲಿ ಸುತ್ತಾಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ ಶಾಸಕರು, ರಾಜಕಾಲುವೆಗಳ ದುರಸ್ತಿ ಬಗ್ಗೆ ಕಟ್ಟುನಿ
ಟ್ಟಿನ ಸೂಚನೆ ನೀಡಿದರಲ್ಲದೆ, ಕಸ್ತೂರಿ ಬಡಾವಣೆ ಪಕ್ಕದ ರಾಜಕಾಲುವೆ ಮಾರ್ಗವನ್ನು ಬದಲಿಸಿರುವ ಬಗ್ಗೆ ಕ್ರಮವಹಿಸುವಂತೆ ಆದೇಶಿಸಿದರು.
ಒಳಚರಂಡಿ ಅವ್ಯವಸ್ಥೆ, ಬೀದಿದೀಪ, ಕುಡಿಯುವ ನೀರು, ಸಂಪರ್ಕ ರಸ್ತೆ ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಸ್ಥಳೀಯರಿಂದ ಆಲಿಸಿದ ಮುನಿರಾಜು, ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಂಡು ತಮಗೆ ವರದಿ ನೀಡುವಂತೆ ತಿಳಿಸಿದರು.
ಜಂಟಿ ಆಯುಕ್ತ ಕೆ.ಎಚ್. ಜಗದೀಶ್ ಸೇರಿದಂತೆ ಅನೇಕ ಅಧಿಕಾರಿಗಳು, ಸ್ಥಳೀಯರು ಹಾಜರಿದ್ದರು.