ಪೀಣ್ಯ ದಾಸರಹಳ್ಳಿ: ‘ನಾವು ಸಾಕ್ಷಾತ್ ದೇವರನ್ನು ನೋಡಿಲ್ಲ. ಆದರೆ ನಾಡಿಗೆ ಅಕ್ಷರ, ಅನ್ನದಾಸೋಹ, ಭಕ್ತಿ, ಪೂಜೆ ನೀಡಿದ ಸಿದ್ದಗಂಗಾಶ್ರೀ ಅಂತಹ ಮಹಾನ್ ಪುರುಷರನ್ನು ದೇವರ ರೂಪದಲ್ಲಿ ಕಂಡಿದ್ದೇವೆ’ ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು.
ಭುವನೇಶ್ವರಿ ಬಡಾವಣೆಯಲ್ಲಿ ಕಾಯಕಯೋಗಿ ಸಹಕಾರ ಸಂಘ ಮತ್ತು ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ವೇದಿಕೆ ಹಾಗೂ ಇತರೆ ಸಂಘದ ವತಿಯಿಂದ ಸಿದ್ದಗಂಗಾ ಶ್ರೀಗಳ 5ನೇ ವರ್ಷದ ಪುಣ್ಯಸ್ಮರಣೆಯಲ್ಲಿ ಸ್ವಾಮೀಜಿ ಪುತ್ತಳಿಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
‘ಸಿದ್ದಗಂಗಾ ಮಠ ಅನೇಕ ಭಕ್ತ ಸಮೂಹವನ್ನು ಹೊಂದಿರುವ ಮಠ. ಶ್ರೀಗಳ ನೆನಪು ಮಠದಲ್ಲಿ ಹಾಗೂ ಸಮಾಜದ ಮಧ್ಯೆ ಸೂರ್ಯ ಚಂದ್ರ ಇರುವರಿಗೂ ಇರುತ್ತದೆ. ಅಂತಹ ಆರಾಧ್ಯ ದೈವ ತ್ರಿವಿಧ ದಾಸೋಹಿಯನ್ನು ದರ್ಶನ ಪಡೆದಿದ್ದ ನಾವೇ ಧನ್ಯರು’ ಎಂದರು.
ಸಂಘದ ಅಧ್ಯಕ್ಷ ಕಾಯಕಯೋಗಿ ಬಸವರಾಜಣ್ಣ ಮಾತನಾಡಿ ‘ಸರ್ಕಾರವು ಸಿದ್ದಗಂಗಾ ಶ್ರೀಗಳ ಪುಣ್ಯಸ್ಮರಣೆಯ ದಿನವನ್ನು ದಾಸೋಹ ದಿನವನ್ನಾಗಿ ಆಚರಿಸಿದೆ. ಆದ ಕಾರಣ ಈ ಕ್ಷೇತ್ರದಲ್ಲಿ ಭಕ್ತರು ರಸ್ತೆಗಳಲ್ಲಿ, ಮನೆಗಳಲ್ಲಿ ಸ್ವಾಮೀಜಿ ಭಾವಚಿತ್ರ ಇಟ್ಟು ಕೈಲಾದಷ್ಟು ಅನ್ನದಾನ ಮಾಡಿ ಸಿಹಿ ಹಂಚುತ್ತಿದ್ದಾರೆ’ ಎಂದರು.
ಸಾಹಿತಿ ವೈ.ಬಿ.ಎಚ್ ಜಯದೇವ್ ಮಾತನಾಡಿ’ ಅನ್ನ, ಅರಿವು, ಶಿಕ್ಷಣ ನೀಡಿ ಜಗತ್ತಿಗೆ ಮಾನ್ಯರಾದವರು ಸಿದ್ದಗಂಗಾ ಶ್ರೀಗಳು ಇವರು ತೋರಿದ ಹಾದಿಯಲ್ಲಿ ನಾವು ನಡೆಯಬೇಕಿದೆ’ಎಂದರು.ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಬಿ.ಟಿ. ಸುರೇಶ್, ಸುಜಾತ ಮೇಲೆಗೌಡ, ಶಿವಶಂಕರ್, ರಾಜೇಂದ್ರ ಕೊಣ್ಣೂರ ಮತ್ತು ಪದಾಧಿಕಾರಿಗಳು ಇದ್ದರು.