ಪೀಣ್ಯ ದಾಸರಹಳ್ಳಿ: ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಆಗಬಾರದು ಮಕ್ಕಳು ವಿದ್ಯಾಭ್ಯಾಸ ಮಾಡಲು ಒಳ್ಳೆಯ ವಾತಾವರಣ ಕಲ್ಪಿಸಬೇಕು ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು.
ಸಿಡೇದಹಳ್ಳಿಯ ಸರ್ಕಾರಿ ಶಾಲೆಗೆ ಎರಡು ಕೊಠಡಿ, ಚಿಕ್ಕ ಬಾಣಾವರ ಸರ್ಕಾರಿ ಉರ್ದು ಶಾಲೆಗೆ ಎರಡು ಕೊಠಡಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮತ್ತು ಅಬ್ಬಿಗೆರೆಯ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನಾಲ್ಕು ಶೌಚಾಲಯ ಕೊಠಡಿ ಉದ್ಘಾಟಿಸಿ ಮಾತನಾಡಿದರು.
‘ಕ್ಷೇತ್ರದ ಹಲವು ಪ್ರದೇಶದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿ ಇದ್ದ ಕಾರಣ ಕೊಠಡಿಗಳ ಕೊರತೆ ಇತ್ತು. ಅಂತಹ ಶಾಲೆಗಳಲ್ಲಿ ಕೊಠಡಿಗಳ ನಿರ್ಮಾಣ ಕಾರ್ಯ ನಡೆಯಲಿದೆ’ ಎಂದರು.
ರೀಚಿಂಗ್ ಹ್ಯಾಂಡ್ಸ್ ಎಂಬ ಎನ್ಜಿಓ ಸಂಸ್ಥೆಯವರು ಅಬ್ಬಿಗೆರೆ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ 4 ಶೌಚ ಗೃಹ ನಿರ್ಮಿಸಿದ್ದರು. ಈಗ ವಿದ್ಯಾರ್ಥಿಗಳಿಗೆ ಮತ್ತೆ ನಾಲ್ಕು ಶೌಚ ಗೃಹಗಳನ್ನು ನಿರ್ಮಿಸಿದ್ದಾರೆ. ಇಂತಹ ಧಾನಿಗಳು ಮುಂದೆ ಬಂದು ಸರ್ಕಾರಿ ಶಾಲೆಗಳ ಏಳಿಗೆಗೆ ಕೊಡುಗೆ ನೀಡಬೇಕು’ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎನ್ಜಿಓ ಸಂಸ್ಥೆಯ ಮುಖ್ಯಸ್ಥ ಅಬ್ರಾಹಂ, ಚಿಕ್ಕಬಾಣಾವರ ಪುರಸಭೆ ಮುಖ್ಯ ಅಧಿಕಾರಿ ಹೆಚ್.ಎ ಕುಮಾರ್, ಬಿಜೆಪಿ ಮುಖಂಡರಾದ ಕಬೀರ್ ಅಹಮದ್, ಬಿ ಎಂ ಚಿಕ್ಕಣ್ಣ, ಭಾಗ್ಯಮ್ಮ, ಬಿ. ಲಕ್ಷ್ಮಣ್, ಅಬ್ಬಿಗೆರೆ ಮಂಜಣ್ಣ, ಜನಾರ್ಧನ್ ಮುಂತಾದವರಿದ್ದರು.