ಹೊಸಕೋಟೆ: ರಾಜ್ಯದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಯಲ್ಲಿ ಕಿಯೋನಿಕ್ಸ್ನಂತಹ ಉದ್ದಿಮೆಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.ಅವರು ಕಿಯೋನಿಕ್ಸ್ನ ನೂತನ ಅಧ್ಯಕ್ಷ ರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದರು.
ರಾಜ್ಯದಲ್ಲಿ ಬಹಳಷ್ಟು ಸಾರ್ವಜನಿಕ ಉದ್ದಿಮೆಗಳನ್ನು ಪ್ರಾರಂಭಿಸಿ ಸ್ಥಳೀಯರಿಗೆ ಉದ್ಯೋಗವಕಾಶ ಕಲ್ಪಿಸಿದ್ದಾಗ್ಯೂ ಸಹ ಮಾರುಕಟ್ಟೆಯ ಪರಿಸ್ಥಿತಿಗೆ ಅನುಗುಣವಾಗಿ ತಂತ್ರಜ್ಞಾನ ಅಳವಡಿಕೆ ಮಾಡಿಕೊಳ್ಳದ ಕಾರಣದಿಂದಾಗಿ ಹಾಗೂ ಇನ್ನಿತರೆ ಕಾರಣಗಳಿಂದ ನಷ್ಟ ಅನುಭವಿಸಿ ಮುಚ್ಚುವಂತಹ ಅನಿವಾರ್ಯತೆಯಾಗಿತ್ತು.
ಇದೆಲ್ಲದರ ನಡುವೆಯೂ ಸಹ ಜಾಗತಿಕ ಮಟ್ಟದಲ್ಲಿ ಸ್ಪರ್ಧೆಯನ್ನು ಸಮರ್ಪಕವಾಗಿ ನಿರ್ವಹಿಸುವುದರೊಂದಿಗೆ ಕಾಲಕಾಲಕ್ಕೆ ಬದಲಾಗುತ್ತಿರುವ ತಂತ್ರಜ್ಞಾನವನ್ನು ಅಳವಡಿಸಿಕೊಂಡು ರಾಜ್ಯದ ಕೀರ್ತಿಯನ್ನು ಹೆಚ್ಚಿಸುವಲ್ಲಿ ಕಿಯೋನಿಕ್ಸ್ ಯಶಸ್ವಿಯಾಗಿದೆ. ರಾಜ್ಯವು ಸಿಲಿಕಾನ್ ಸಿಟಿ ಎಂಬ ಖ್ಯಾತಿ ಪಡೆಯುವಲ್ಲಿಯೂ ಸಹ ಕಿಯೋನಿಕ್ಸ್ನ ಪಾತ್ರ ಹೆಚ್ಚಿನದಾಗಿದ್ದು, ಪ್ರಖ್ಯಾತ ಇನ್ಪೋಸಿಸ್ನಂತಹ ಉದ್ದಿಮೆಗಳ ಸ್ಥಾಪನೆಯಲ್ಲಿಯೂ ಸಹ ತನ್ನ ಪ್ರಮುಖ ಕೊಡುಗೆಯನ್ನು ನೀಡಿದೆ.
ಇಂತಹ ಪ್ರತಿಷ್ಠಿತ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಲು ರಾಜ್ಯ ಸರಕಾರ ಅವಕಾಶ ಕಲ್ಪಿಸಿಕೊಟ್ಟಿರುವುದಕ್ಕೆ ಮುಖ್ಯಮಂತ್ರಿ ಸಿದ್ದ
ರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಹಿತಿ ತಂತ್ರಜ್ಞಾನ ಸಚಿವಪ್ರಿಯಾಂಕ್ ಖರ್ಗೆರವರಿಗೆ ಅಭಾರಿಯಾಗಿ
ದ್ದೇನೆ. ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡು, ಸಂಸ್ಥೆಯಲ್ಲಿ ಪಾದರ್ಶಕ ಆಡಳಿತಕ್ಕೆ ಆದ್ಯತೆ ನೀಡುವ ಮೂಲಕ ಮತ್ತಷ್ಟು ಅಭಿವೃದ್ಧಿಪಡಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಲೋಕಸಭಾ ಸದಸ್ಯ ಬಿ.ಎನ್.ಬಚ್ಚೇಗೌಡ, ಸಚಿವ ಪ್ರಿಯಾಂಕ್ ಖರ್ಗೆ, ಗೌರಿಬಿದನೂರು ಶಾಸಕ ಪುಟ್ಟಸ್ವಾಮಿಗೌಡ ಶಾಸಕರನ್ನು ಅಭಿನಂದಿಸಿದರು. ಉದ್ಯಮಿಗಳಾದ ಬಿ.ವಿ.ಬೈರೇ ಗೌಡ, ಪ್ರತಿಭಾ ಶರತ್ ಬಚ್ಚೇಗೌಡ, ರಾಕೇಶ್, ಟೀಂ ಎಸ್ಬಿಜಿ ತಂಡದ ಸದಸ್ಯರುಗಳು, ಅಭಿಮಾನಿಗಳು ಭಾಗವಹಿಸಿದ್ದರು.