ಹೊಸಕೋಟೆ: ಆಸ್ಪತ್ರೆಯಲ್ಲಿ ಆಮ್ಲಜನಕ ಬಳಕೆ, ಡಿ ಗ್ರೂಪ್ ನೌಕರರ ಮರಣದ ನಂತರ ಗೌರವ ಧನ ಬಿಡುಗಡೆ, ಆಸ್ಪತ್ರೆ ತ್ಯಾಜ್ಯ ನಿರ್ವಹಣೆಗೆ ಹಣ ಬಿಡುಗಡೆ ಒಳಗೊಂಡಂತೆ ವಿವಿಧ ವಿಭಾಗಗಳಲ್ಲಿ ಅಗತ್ಯವಾದ ಅನುದಾನದ ಬೇಡಿಕೆ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಪೂರ್ಣವಾದ ಸಿದ್ಧತೆ ಮಾಡಿಕೊಂಡಿರಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಆಸ್ಪತ್ರೆಯ ಆಡಳಿತಾಧಿಕಾರಿಗಳಿಗೆ ಸೂಚಿಸಿದರು.
ಅವರು ನಗರದ ಸರಕಾರಿ ಸಾರ್ವಜನಿಕ ಆಸ್ಪತ್ರೆ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.ಹಿಂದಿನ ತ್ರೈಮಾಸಿಕ ವರದಿಗೆ ಅನುಮೋದನೆ ಪಡೆದ ನಂತರ ಮುಂದಿನ ತ್ರೈಮಾಸಿಕಕ್ಕೆ ಹಣದ ಬಿಡಗಡೆಗೆ ಸೂಕ್ತ ವಿವರಣೆಯೊಂದಿಗೆ ಮಾಹಿತಿ ನೀಡಬೇಕು ಹೀಗೆ ಹಲವಾರು ವಿಭಾಗಗಳಲ್ಲಿ ಹಣದ ಬೇಡಿಕೆಗಳಿಗೆ ಹಣ ಬಿಡುಗಡೆಗೆ ಪೂರ್ಣ ಸಿದ್ದತೆ ಮಾಡಿಕೊಂಡಿರಬೇಕು,
ಈ ಸಂದರ್ಭದಲ್ಲಿ ರೋಗಿಗಳೊಂದಿಗೆ ಹಾಗೂ ಆಸ್ಪತ್ರೆಯ ಸಿಬ್ಬಂದಿಯೊಂದಿಗೆ ಸಮಾಲೋಚನೆ ನಡೆಸಿದ ಶಾಸಕರು ಅಧಿಕಾರಿ ಗಳೊಂದಿಗೆ ಆಸ್ಪತ್ರೆಯಲ್ಲಿನ ಕುಂದುಕೊರತೆ ಬಗ್ಗೆ ಚರ್ಚಿಸಿದರು. ಸಾರ್ವಜನಿಕರಿಗೆ ಇಗ ದೊರೆಯುತ್ತಿರುವ ಚಿಕಿತ್ಸೆಗಿಂತ ಇನ್ನೂ ಹೆಚ್ಚಿನ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲು ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ಮುಂದಿನ ಆರೋಗ್ಯ ರಕ್ಷಾ ಸಮಿತಿಯ ಸಭೆಯಲ್ಲಿ ಸಂಪೂರ್ಣ ದಾಖಲೆಗಳೊಂದಿಗೆ ಸಮೇತ ಮಾಹಿತಿ ನೀಡಬೇಕು.
ಯಾವುದೇ ರೀತಿಯ ಸಮಸ್ಯೆಗಳು ಕಂಡು ಬಂದಲ್ಲಿ ಕೂಡಲೆ ನನ್ನ ಗಮನಕ್ಕೆ ತರಬೇಕು ಎಂದರು.ಆಸ್ಪತ್ರೆಯಲ್ಲಿ ಸರಕಾರದ ಸೌಲಭ್ಯಗಳೊಂದಿಗೆ ಖಾಸಗಿ ಕಾರ್ಖಾನೆಗಳಿಂದ ಒದಗಿಸಿರುವ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಂಡು ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುವ ಮೂಲಕ ವಿಶ್ವಾಸ ಗಳಿಸಿಕೊಳ್ಳಲು ಶ್ರಮಿಸಬೇಕು. ಸರಕಾರಿ ಆಸ್ಪತ್ರೆಯನ್ನು ಬಹಳಷ್ಟು ಬಡಜನರೆ ಅವಲಂಬಿಸಿದ್ದು ಯಾವುದೇ ಕೊರತೆ ಉಂಟಾಗದಂತೆ ಗಮನಹರಿಸಬೇಕು ಎಂದರು.
ಬೆಂ.ಗ್ರಾಮಾಂತರ ಜಿಲ್ಲಾ ಉಪವಿಭಾಗಾಧಿಕಾರಿ ಶ್ರೀನಿವಾಸ್, ತಾಲೂಕು ಆರೋಗ್ಯಾಧಿಕಾರಿ ಡಾ ವೀಣಾ, ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ ಸತೀಶ್ ಮುಖಂಡರಾದ ಎಸ್.ಮಂಜುನಾಥ್, ಬೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಪುಟ್ಟಸ್ವಾಮಿ ಮೊದಲಾದವರು ಹಾಜರಿದ್ದರು.