ಹೊಸಕೋಟೆ: ಗ್ರಾಮಗಳಲ್ಲಿ ಉತ್ಪಾದನೆಯಾಗುವ ಮಲ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ದೃಷ್ಟಿಯಿಂದ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.ಅವರು ತಾಲೂಕಿನ ತಿರುಮಲಶೆಟ್ಟಿಹಳ್ಳಿ ಗ್ರಾಮದಲ್ಲಿ ಅಂದಾಜು 90 ಲಕ್ಷ ರೂ.ಗಳ ವೆಚ್ಚದಲ್ಲಿ ಮಲ ತ್ಯಾಜ್ಯ ವಿಲೇವಾರಿಘಟಕಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಮಾಂತರ ಜಿಲ್ಲೆ ನೀರು ಸರಬರಾಜು ಇಲಾಖೆ ವತಿಯಿಂದ ಅನುದಾನವನ್ನ ಒದಗಿಸಿ ಮಲ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಾಣ ಮಾಡಲಾಗುತ್ತಿದೆ. ಒಳಚರಂಡಿ ಇಲ್ಲದ ಗ್ರಾಮಗಳಲ್ಲಿ ಒಳಚರಂಡಿ ಸಂಸ್ಕರಣಾ ಘಟಕದ (ಎಸ್ಟಿಪಿ) ಟ್ಯಾಂಕ್ಗಳಲ್ಲಿ ಶೇಖರಣೆಯಾಗಿ ಮಲವನ್ನು ಸಕ್ಕಿಂಗ್ ಯಂತ್ರಗಳ ಮೂಲಕ ಸಂಗ್ರಹಣೆ ಮಾಡಿ ಈ ಘಟಕದಲ್ಲಿ ಶೇಖರಿಸಿ ನಂತರ ನೀರನ್ನು ಶುದ್ಧೀಕರಿಸಿ ಹರಿಸುವುದರ ಮೂಲಕ ಒಣಗಿದ ಮಲವನ್ನು ಗೊಬ್ಬರ ಮಾಡಿ ಅದನ್ನು ಕೆಜಿ ಲೆಕ್ಕದಲ್ಲಿ ಮಾರಾಟ ಮಾಡಲಾಗುವುದು.
ಇದರಿಂದ ಅವೈಜ್ಞಾನಿಕವಾಗಿ ಕಾರ್ಮಿ ಕರನ್ನು ಎಸ್ಟಿಪಿ ಪ್ಲಾಂಟ್ಗೆ ಇಳಿಸಿ ಮಲವನ್ನು ವಿಲೇವಾರಿ ಮಾಡುವುದು ನಿವಾರಣೆಯಾಗಲಿದೆ ಎಂದರು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನ್ನಪೂರ್ಣ ಶಂಕರ್ ಮಾತನಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಗ್ರಾಮಗಳಲ್ಲಿ ಮಲದ ಗುಂಡಿಗಳೇ ಇದ್ದು ಅದನ್ನು ಸಮರ್ಪಕವಾಗಿ ವಿಲೇವಾರಿ ಮಾಡುವುದು ಕಷ್ಟ ಸಾಧ್ಯವಾಗಿತ್ತು. ಈಗ ವೈಜ್ಞಾನಿಕ ಮಲ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡುತ್ತಿರುವುದರಿಂದ ಸಾಕಷ್ಟು ಅನುಕೂಲವಾಗಲಿದೆ ಎಂದರು.
ಟಿಎಪಿಸಿಎಂಎಸ್ ಅಧ್ಯಕ್ಷ ಬಾಬುರೆಡ್ಡಿ, ಅನುಗೊಂಡನಹಳ್ಳಿ ಹೋಬಳಿ ಕಾಂಗ್ರೆಸ್ ಮುಖಂಡ ಬೋಧನಹೊಸಹಳ್ಳಿ ಪ್ರಕಾಶ್, ಮಾನವ ಹಕ್ಕುಗಳ ಜಾಗೃತಿ ಸಮಿತಿ ಅಧ್ಯಕ್ಷ ಸಮೇತನಹಳ್ಳಿ ಲಕ್ಷ್ಮಣ ಸಿಂಗ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಾರಾಯಣಪ್ಪ, ಮುಖಂಡರಾದ ಮಲ್ಲಸಂದ್ರ ಶೇಷಪ್ಪ, ಕೊರಳೂರು ಸುರೇಶ್, ಮುತ್ಕೂರು ಮುನಿರಾಜು, ರಾಜಪ್ಪ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.