ಹೊಸಕೋಟೆ: 30 ವರ್ಷಗಳಿಂದ ದೊಡ್ಡಹುಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡುವ ಭರವಸೆ ನೀಡಿದಂತೆ ಇಂದು 102 ಹಕ್ಕು ಪತ್ರ ಹಾಗೂ ಇ-ಖಾತೆ ವಿತರಣೆ ಮಾಡಿ ನುಡಿದಂತೆ ನಡೆದ ರಾಜ್ಯ ಸರಕಾರ ಜನಪರವಾಗಿದೆ ಎಂಬುದನ್ನು ಸಾಬೀತುಪಡಿಸಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಹಕ್ಕುಪತ್ರ ಹಾಗೂ ಇ-ಖಾತೆ, ಮೇವು ಕತ್ತರಿಸುವ ಯಂತ್ರ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಸುಮಾರು 20 ಕೋಟಿ ಮೊತ್ತದ ಆಸ್ತಿ ಬಡವರಪರವಾಗಿ ಮಾಡಿಕೊಟ್ಟ ಕೆಲಸ ನಮ್ಮ ತಾಲ್ಲೂಕಿನಲ್ಲಿ ಮಾಡಿದ್ದೇವೆ. ಬಡವರ ಮನೆ ಬಾಗಿಲಿಗೆ ಹಕ್ಕು ಪತ್ರ ತಲುಪಿಸುವ ಕೆಲಸ ಮಾಡಿದ ತಾಲೂಕು ಎಂಬ ಹೆಗ್ಗಳಿಕೆಯನ್ನು ತಾಲೂಕು ಹೊಂದಿದೆ.
ಸ್ಮಶಾನದ ಕೊರತೆ ಇದ್ದ ಗ್ರಾಮದಲ್ಲಿ ಇದೀಗ ಸರ್ವೇ ನಂ. 21ರಲ್ಲಿ 19 ಗುಂಟೆ ಹಾಗೂ ಸರ್ವೇ ನಂ. 71ರಲ್ಲಿ 1 ಎಕರೆ 7 ಗುಂಟೆ ಗ್ರಾಮಕ್ಕೆ ಹಸ್ತಾಂತರ ಮಾಡಲಾಗಿದೆ. ದೊಡ್ಡಹುಲ್ಲೂರು ಗ್ರಾಮದಲ್ಲಿ ಒಂದೇ ಸೂರಿನಡಿ ವಾಸಿಸುತ್ತಿರುವ ಬಡವರ ಅನುಕೂಲಕ್ಕಾಗಿ ಸರ್ವೇ ನಂ 78ರಲ್ಲಿ 3 ಎಕರೆ 2 ಗುಂಟೆ ಸ್ಥಳ ಗುರುತಿಸಿದ್ದು ಆಶ್ರಯ ನಿವೇಶಕ್ಕೆ ಹಸ್ತಾಂತರಿಸಲಾಗಿದೆ. ನಿಸ್ಪಕ್ಷಪಾತವಾಗಿ ಗ್ರಾಮದ ಅರ್ಹರಿಗೆ 150 ನಿವೇಶನಗಳನ್ನು ವಿತರಿಸಲಾಗುವುದು.
ಚೊಕ್ಕಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗಾರಿಕಾ ಪ್ರದೇಶವಿರುವ ಕಾರಣ ಜನಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆ ಮಕ್ಕಳ ಸಂಖ್ಯೆ ಸಹ ಹೆಚ್ಚಾಗುತ್ತಿದ್ದು ಮಕ್ಕಳ ವಿದ್ಯಾಭ್ಯಾಸಕ್ಕಾಗಿ 18.5 ಗುಂಟೆಯನ್ನು ಸರಕಾರಿ ಶಾಲೆಗೆ ಮಂಜೂರಾತಿ ಮಾಡಿಕೊಟ್ಟು 1.15 ಗುಂಟೆ ಅಂಗನವಾಡಿ ಕೇಂದ್ರಕ್ಕೆ ಸ್ಥಳ ಮೀಸಲಿಡಿಸಲಾಗಿದೆ ಎಂದರು.
ನಿಗಮ ಮಂಡಳಿ ಆಯ್ಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಶಾಸಕರು ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳು ಯಾವುದೇ ಜವಾಬ್ದಾರಿ ನೀಡಿದರೂ ಸಹ ನೆರವೇರಿಸಲು ಸಿದ್ಧನಿದ್ದೇನೆ. ಮೂರು ವರ್ಷದಿಂದ ಜನರ ಮಧ್ಯೆ ಶಾಸಕನಾಗಿದ್ದೇನೆ. ಜನರ ಸಮಸ್ಯೆ ಇನ್ನಷ್ಟು ಪರಿಹಾರ ಮಾಡಲು ಹಲವಾರು ಕಾರ್ಯಕ್ರಮ ರೂಪಿಸಬೇಕು. ನಾನು ಅತೃಪ್ತನಲ್ಲ, ಅಸಮಧಾನಿತನಲ್ಲ, ಕೊಡುವ ಜವಾಬ್ದಾರಿ ನಿರ್ವಹಿಸುತ್ತೇನೆ.
ಗೃಹ ಮಂಡಳಿ ಸೇರಿದಂತೆ ಯಾವುದೇ ಜವಾಬ್ದಾರಿ ನಿರ್ವಹಿಸಲು ನಾನು ತಯಾರಿದ್ದೇನೆ ಎಂದು ಹೇಳಿದರು.ಟಿಎಪಸಿಎಂಎಸ್ನ ಮಾಜಿ ಅಧ್ಯಕ್ಷ ಎನ್.ಮಂಜುನಾಥ್ ಮಾತನಾಡಿ ಸುಮಾರು ಮೂರುದಶಕಗಳ ಕಾಲ ಬಾಕಿ ಉಳಿದಿದ್ದ ಹಕ್ಕುಪತ್ರ ವಿತರಣೆಯ ಕನಸನ್ನು ಶಾಸಕ ಶರತ್ ಬಚ್ಚೇಗೌಡರು ನನಸು ಮಾಡುªಲ್ಲಿ ಯಶಸ್ವಿಯಾಗಿದ್ದಾರೆ.
ಚುನಾವಣೆ ಸಂಧರ್ಭದಲ್ಲಿ ನೀಡಿದ ಭರವಸೆಯನ್ನು ಗೆಲುವುಸಾಧಿಸಿದ ಕೆಲವೇ ತಿಂಗಳುಗಳಲ್ಲಿ ಈಡೇರಿಸಿರುವುದು ಇವರ ಜನಪರ ಕಾಳಜಿಗೆ ನಿದರ್ಶನವಾಗಿದೆ. ಶಾಸಕರು ಕೊಟ್ಟ ಮಾತನ್ನು ಪ್ರತಿ ಗ್ರಾಮಗಳಲ್ಲಿ ಈಡೇರಿಸಲು ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ಹಕ್ಕುಪತ್ರ ಸ್ವೀಕರಿಸಿದ ಬಹಳಷ್ಟು ಫಲಾನುಭವಿಗಳು ಹಲವಾರು ಕಾರಣಗಳಿಂದಾಗಿ ಕಳೆದ 30 ವರ್ಷಗಳಿಂದ ಹಕ್ಕುಪತ್ರ ಪಡೆಯಲು ಸಾಧ್ಯವಾಗದ್ದನ್ನು ಮಾಡಿಕೊಡುವ ಮೂಲಕ ಬಡಜನರಿಗೆ ಅನುಕೂಲ ಕಲ್ಪಿಸಿದ ಬಗ್ಗೆ ಕೃತಜ್ಞತೆ ಸಲ್ಲಿಸಿದರು.
ಇದೇ ರೀತಿ ನಿರ್ಮಾಣಗೊಳ್ಳುವ ಮನೆಗಳಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಸಹ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.ತಹಶೀಲ್ದಾರ್ ವಿಜಯಕುಮಾರ್, ತಾಪಂ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್, ಕಂದಾಯ ನಿರೀಕ್ಷಣಾಧಿಕಾರಿ ಆಂಜಿನಮ್ಮ, ಗ್ರಾಮ ಲೆಕ್ಕಾಧಿಕಾರಿ ಕಿರಣ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಶಾ, ಕಾರ್ಯದರ್ಶಿ ರಮೇಶ್, ಮುಖಂಡರಾದ ಬಿ.ಎನ್. ಗೋಪಾಲಗೌಡ, ಬಿ.ವಿ. ಬೈರೇಗೌಡ, ಶಿವನಾಪುರ ಕಲ್ಲಪ್ಪ, ತಹಸಿಲ್ದಾರ್ ವಿಜಯಕುಮಾರ್ ಇತರರು ಭಾಗವಹಿಸಿದ್ದರು.