ಹೊಸಕೋಟೆ: ನಗರಸಭೆ ವ್ಯಾಪ್ತಿಯ ಎಲ್ಲಾ ವಾರ್ಡ್ಗಳಲ್ಲಿ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಅಗತ್ಯವಾದ ಅನುದಾನ ಒದಗಿಸಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡು ಮಾದರಿ ಪಟ್ಟಣವನ್ನಾಗಿಸಲು ಪಣ ತೊಡಲಾಗಿದೆ. ಈ ದಿಶೆಯಲ್ಲಿ ಪಕ್ಷಾತೀತವಾಗಿ ಎಲ್ಲರೂ ಸಹಕರಿಸಬೇಕಾದ್ದು ಅಗತ್ಯವಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ಕೆಕೆ ಬಡಾವಣೆಯಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿ ಹಾಗೂ ನೂತನ ಕೊಳವೆಬಾವಿ ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ನಗರದ ಸರ್ವತೋಮುಖ ಅಭಿವೃದ್ಧಿದೃಷ್ಟಿಯಿಂದ ವಿವಿಧ ವಾರ್ಡ್ಗಳಲ್ಲಿ ಅಗತ್ಯ ವಾದಂತಹ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಕೋಟ್ಯಾಂತರ ರೂ ವೆಚ್ಚದಲ್ಲಿ ಚಾಲನೆ ನೀಡಲಾಗಿದೆ.
ಮುಂದಿನ ದಿನಗಳಲ್ಲಿ ನಗರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು. ಕಾಮಗಾರಿ ಪ್ರಾರಂಭಕ್ಕೆ ವಿಳಂಬ ಮಾಡದೆ ತ್ವರಿತವಾಗಿ ಪ್ರಾರಂಭ ಮಾಡಿ ಗುಣಮಟ್ಟಕ್ಕೆ ಮುಂದಾಗಬೇಕು ಎಂದರು.
ಸಿಮೆಂಟ್ ಕಾಂಕ್ರೀಟ್ ಚರಂಡಿ ನಿರ್ಮಾಣ ಕಾರ್ಯವನ್ನು ವಿದಾನಸಭೆ ಚುನಾವಣೆಯ ಕಾರಣದಿಂದಾಗಿ ಏಪ್ರಿಲ್ 2023ರಲ್ಲಿ ತರಾತುರಿಯಲ್ಲಿ ಕೈಗೊಂಡಿದ್ದು ಬಹಳಷ್ಟು ವಾರ್ಡ್ಗಳಲ್ಲಿ ಕಾಮಗಾರಿ ಸ್ಥಗಿತಗೊಂಡು ನಿವಾಸಿಗಳು ತೀವ್ರವಾದ ಸಮಸ್ಯೆ ಎದುರಿಸಬೇಕಾಯಿತು.
ಇದನ್ನು ನಿವಾರಿಸಲು ಈ ಕಾಮಗಾರಿಯನ್ನು ಪುನರಾರಂಭಿಸಲಾಗಿದ್ದು ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು.
ಕೆಕೆ ಬಡಾವಣೆಯಲ್ಲಿ ಮಳೆ ಬಂದಾಗ ನೀರು ಸರಾಗವಾಗಿ ಹರಿಯಲಾಗದೆ ಮನೆಗಳಿಗೆ ನುಗ್ಗುವ ಬಗ್ಗೆ ನಾಗರೀಕರು ಶಾಸಕ ಶರತ್ ಬಚ್ಚೇಗೌಡರ ಗಮನಕ್ಕೆ ತರಲಾಗಿ, ನೀರು ಸರಾಗವಾಗಿ ಹರಿದು ವರದಾಪುರ ಕೆರೆಗೆ ಸೇರುವಂತೆ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.
ತಮ್ಮೇಗೌಡ ಬಡಾವಣೆಯಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ನಿವಾಸಿಗಳು ಮಳೆ ನೀರು ಚರಂಡಿಗೆ ಹರಿಯಲು ಅವಕಾಶ ಕಲ್ಪಿಸಿಕೊಡಬೇಕು ಹಾಗೂ ಕಾಂಕ್ರೀಟ್ಗೆ ಸೂಕ್ತ ಕ್ಯೂರಿಂಗ್ ಮಾಡಬೇಕು ಎಂದು ಮನವಿ ಮಾಡಿದರು. ಶಾಸಕರು ಸ್ಥಳದಲ್ಲಿದ್ದ ನಗರಸಭೆ ಇಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಈ ಬಗ್ಗೆ ಗಮನಹರಿಸಬೇಕು ಎಂದು ಸೂಚಿಸಿದರು.
ನಗರಸಭೆ ಸದಸ್ಯ ಕೇಶವಮೂರ್ತಿ, ಮಂಜುನಾಥ್, ಉದ್ಯಮಿ ಬಿವಿ ಬೈರೇಗೌಡ, ಟಿಎಪಿಸಿಎಂಎಸ್ ನಿರ್ದೇಶಕ ಸಿ.ಮುನಿಯಪ್ಪ, ಮುಖಂಡರಾದ ಎಚ್.ಎಂ.ಸುಬ್ಬರಾಜು, ಡಿ.ಸಿ. ನಾಗರಾಜ್, ನಿಸಾರ್ ಅಹಮದ್, ಗೋಪಿ, ಹರೀಶ್ ಗೌಡ, ಮೋಹನ್ ಬಾಬು, ಎಚ್.ಸಿ.ಷಣ್ಮುಗಂ, ಹೇಮಂತ್, ರಾಜಶೇಖರ್, ಬಚ್ಚಣ್ಣ, ಮಂಜುನಾಥ್, ಕುಮಾರ್, ಸವಿತಾ ಶ್ರೀನಿವಾಸ್, ಪುಷ್ಪಮ್ಮ, ಸಾವಿತ್ರಿ, ಪವಿತ್ರ, ಗುತ್ತಿಗೆದಾರ ಈರಣ್ಣ, ತಗ್ಲಿ ನಾರಾಯಣಸ್ವಾಮಿ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.
ಕಾಂಗ್ರೆಸ್ ಶಾಸಕರಲ್ಲಿ ಒಗ್ಗಟ್ಟಿನ ಬಲವಿದೆ: ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿ(ಎಸ್) ಮೈತ್ರಿಯ ಅಭ್ಯರ್ಥಿ ಉಪೇಂದ್ರ ರೆಡ್ಡಿ ಅವರು ಸೋಲನುಭವಿಸಿದ್ದಾರೆ. ಬಿಜೆಪಿ-ಜೆಡಿ(ಎಸ್) ಮೈತ್ರಿ ಪಕ್ಷದ ಬಳಿ ಗೆಲುವಿಗೆ ಅಗತ್ಯವಾದ ಶಾಸಕರ ಸಂಖ್ಯಾಬಲ ಇಲ್ಲದಿದ್ದರೂ ಸಹ ಅನವಶ್ಯಕವಾಗಿ ಅವಿರೋಧ ಆಯ್ಕೆ ತಪ್ಪಿಸಲು ಕುತಂತ್ರಗಳನ್ನು ಮಾಡುವ ಹಾಗೂ ಕಾಂಗ್ರೆಸ್ ಶಾಸಕರಲ್ಲಿ ಗೊಂದಲ ನಿರ್ಮಿಸುವ ದುರುದ್ದೇಶದಿಂದ ಕುಪೇಂದ್ರ ರೆಡ್ಡಿ ಅವರನ್ನ ಮೈತ್ರಿ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಿ ಸೋಲನುಭಸುವಂತಾಯಿತು. ಆದರೆ ಕಾಂಗ್ರೆಸ್ ಪಕ್ಷದಿಂದ ಮೂರು ಜನ ಅಭ್ಯರ್ಥಿಗಳು ಗೆಲುವನ್ನ ಸಾಧಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಮೇಲಿನ ವಿಶ್ವಾಸವನ್ನು ಕಾಂಗ್ರೆಸ್ ಶಾಸಕರು ಎಂದಿಗೂ ಕಳೆದುಕೊಂಡಿಲ್ಲ ಬದಲಾಗಿ ಒಗ್ಗಟ್ಟಿನ ಬಲ ಪ್ರದರ್ಶನ ಮಾಡಿದ್ದಾರೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.