ಬೇಲೂರು: ಇತ್ತೀಚಿನ ದಿನದಲ್ಲಿ ಮಲೆನಾಡು ಭಾಗದಲ್ಲಿ ಮಾನವ ಮತ್ತು ಪ್ರಾಣಿಗಳ ಸಂಘರ್ಷ ತೀವ್ರತೆ ಪಡೆದಿದೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿ ಕಾಡಾನೆ ದಾಳಿಗೆ ಶಾಶ್ವತ ಪರಿಹಾರವನ್ನು ನೀಡಬೇಕು ಇಲ್ಲವಾದರೆ ಬೆಳೆಗಾರರ ಜೊತೆ ಧರಣಿ ನಡೆಸಲು ಸಿದ್ದವೆಂದು ಬೇಲೂರು ಶಾಸಕ ಹೆಚ್.ಕೆ.ಸುರೇಶ್ ಎಚ್ಚರಿಕೆ ನೀಡಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ಕಾಡಾನೆ ದಾಳಿಯಿಂದ ಗಾಯಗೊಂಡ ಗಾಯಾಳುಗಳ ಆರೋಗ್ಯವನ್ನು ವಿಚಾರಿಸಿದ ಬಳಿಕ ಪತ್ರಿಕೆಯೊಂದಿಗೆ ಮಾತನಾಡಿದ ಅವರು ತಡರಾತ್ರಿ ಅರೇಹಳ್ಳಿ ಹೋಬಳಿ ವ್ಯಾಪ್ತಿಯ ಬ್ಯಾದನೆ ಗ್ರಾಮದ ರಮೇಶ್ ಮತ್ತು ಹೊಸಮನೆ ಗ್ರಾಮದ ಶಿವಕುಮಾರ್ ಎಂಬವರ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದ ಪರಿಣಾಮದಿಂದ ಸದ್ಯ ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರನ್ನು ನಾನು ಭೇಟಿಯಾಗಿ ನಿಮ್ಮ ಜೊತೆ ಸದಾ ಇರುವ ಬಗ್ಗೆ ಆತ್ಮವಿಶ್ವಾಸ ಮೂಡಿಸಲಾಗಿದೆ ಎಂದ ಅವರು ಮಲೆನಾಡು ಭಾಗದಲ್ಲಿ ಹೆಚ್ಚುತ್ತಿರುವ ಕಾಡಾನೆ ಹಾವಳಿಯಿಂದ ಬೆಳೆಗಾರರ ಪರಿಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ.
ಮೊದಲೇ ಅತಿವೃಷ್ಠಿ-ಅನಾವೃಷ್ಟಿಯಿಂದ ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರು ಕಾಡಾನೆ ಹಾವಳಿಯಿಂದ ಬದುಕು ನರಕವಾಗಿದೆ. ಈ ಬಗ್ಗೆ ಸರ್ಕಾರ ಜಾಣ ಮೌನಕ್ಕೆ ಜಾರದೆ ಶೀಘ್ರವೇ ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ. ವಿಶೇಷವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಕಚೇರಿಯಲ್ಲಿ ಕಾಲ ಹರಣ ಮಾಡದೆ ಸಂಕಷ್ಟ ರೈತರ ಬಳಿ ಧಾವಿಸಬೇಕಿದೆ.
ಹಾಗೂ ಕಾಡಾನೆ ಹಾವಳಿ ಬಗ್ಗೆ ಸರ್ಕಾರಕ್ಕೆ ನಿಖರ ಮಾಹಿತಿ ನೀಡಬೇಕಿದೆ. ಕಾಡಾನೆ ಸಮಸ್ಯೆ ಬೇಲೂರು-ಸಕಲೇಶಪುರ ಮತ್ತು ಮೂಡಿಗೆರೆ ಮೂರು ತಾಲ್ಲೂಕಿನ ಒಟ್ಟಿನ ಸಮಸ್ಯೆಯಾದ ಹಿನ್ನಲೆಯಲ್ಲಿ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರಕ್ಕಾಗಿ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸುವ ಬಗ್ಗೆ ತಿಳಿಸಿದರು.
ಕಾಡಾನೆ ಹಾವಳಿಯಿಂದ ಗಾಯಗೊಂಡ ಮತ್ತು ದಾಳಿಯಿಂದ ಬೆಳೆ ನಷ್ಟಕ್ಕೆ ಸರ್ಕಾರ ಸೂಕ್ತ ರೀತಿಯ ವೈಜ್ಞಾನಿಕ ಪರಿಹಾರ ನೀಡಬೇಕು ಎಂಬ ಬಗ್ಗೆ ನಮ್ಮ ಒತ್ತಾಯವಿದೆ. ರಾಕ್ಷಸನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬ ಗಾದೆ ಮಾತಿನಂತೆ ಬೇಕಾಬಿಟ್ಟಿ ಪರಿಹಾರದ ಬದಲು ವೈಜ್ಞಾನಿಕ ಪರಿಹಾರ ನೀಡಬೇಕು ಹಾಗೂ ಅರಣ್ಯ ಇಲಾಖೆಗೆ ಹೆಚ್ಚುವರಿ ಸಿಬ್ಬಂದಿಗಳನ್ನು ನೀಡಬೇಕು ಇನ್ನು ಆನೆ ಕಾರಿಡಾರ್ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಕ್ಕೆ ಸಂಬಂಧ ಪಟ್ಟವರು ಮುಂದಾಗಿ ಜನ-ಸಾಮಾನ್ಯರ ಕಷ್ಟಗಳನ್ನು ಬಗೆಹರಿಸಬೇಕು ಈ ಬಗ್ಗೆ ಶೀಘ್ರವೇ ಸಂಬಂಧ ಪಟ್ಟವರ ಸಭೆಯನ್ನು ಕರೆಯಲಾಗುತ್ತದೆ ಇಂದು ಹಾಸನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಆಗಮಿಸಲಿದ್ದ ಅವರಿಗೆ ಮನವಿ ಪತ್ರ ನೀಡಲಾಗುತ್ತದೆ ಮತ್ತು ಕಾಡಾನೆ ಸಮಸ್ಯೆ ಬಗ್ಗೆ ಮನವರಿಕೆ ಮಾಡಲಾಗುತ್ತದೆ ಎಂದರು.
Leave a Review