ಯಲಹಂಕ: ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಂದಾದ ಬಳಿಕ ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಪರಿಸ್ಥಿತಿ ಉಂಟಾಗಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್ ಹೇಳಿದರು.ಕಳೆದ ಬಾರಿ 2019ರಲ್ಲಿ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಬಿಜಿಪಿಗೆ 45,000 ಮತಗಳ ಲೀಡ್ ದೊರೆತಿತ್ತು, ಈ ಬಾರಿ ಎನ್ ಡಿಎಗೆ 1 ಲಕ್ಷಕ್ಕೂ ಹೆಚ್ಚು ಮತಗಳ ಲೀಡ್ ಸಿಗಲಿದೆ, ಎಂದು ಶಾಸಕ ಎಸ್.ಆರ್.ವಿಶ್ವನಾಥ್ ವಿಶ್ವಾಸ ವ್ಯಕ್ತಪಡಿಸಿದರು.
ಯಲಹಂಕ ವಿಧಾನಸಭಾ ಕ್ಷೇತ್ರದ ತೋಟದಗುಡ್ಡಹಳ್ಳಿ, ಅಂಚೇಪಾಳ್ಯ ಮೊದಲಾದ ಕಡೆಗಳಲ್ಲಿ ಶಾಸಕ ಎಸ್.ಆರ್.ವಿಶ್ವನಾಥ್ ಅವರೊಂದಿಗೆ ಡಾ.ಕೆ.ಸುಧಾಕರ್ ಪ್ರಚಾರ ಮತ್ತು ಸಭೆ ನಡೆಸಿದರು.ನಂತರ ಮಾತನಾಡಿ, ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಎಸ್.ಆರ್.ವಿಶ್ವನಾಥ್ ಅವರೊಂದಿಗೆ ಸಭೆ ನಡೆಸಿದ್ದೇನೆ. ಇಲ್ಲಿ ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಸ್ಥಿತಿ ಇದೆ. ಶೇ.80 ರಷ್ಟು ಮತಗಳು ಬಿಜೆಪಿಗೆ ದೊರೆಯಲಿದೆ. ಆದರೆ ಕಾಂಗ್ರೆಸ್ಗೆ ಶೇ.20 ರಷ್ಟೂ ಮತಗಳು ದೊರೆಯುವುದು ಅನುಮಾನ. ಇದಕ್ಕೆ ಶಾಸಕರ ಅಭಿವೃದ್ಧಿ ಕಾರ್ಯಗಳೇ ಕಾರಣ ಎಂದರು.
ಯಲಹಂಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸಂಘಟನೆ ಶಕ್ತಿಯುತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಮಾಗಮದಿಂದ ಇಲ್ಲಿ ಹೆಚ್ಚು ಲಾಭವಾಗಲಿದೆ ಎಂದರು.ಯುವನಿಧಿಗೆ ಷರತ್ತು: ಕಾಂಗ್ರೆಸ್ ಸರ್ಕಾರ ಬೆರಳೆಣಿಕೆಯ ನಿರುದ್ಯೋಗಿ ಯುವಜನರಿಗೆ ಷರತ್ತುಗಳನ್ನು ಹಾಕಿ ಹಣ ನೀಡುತ್ತಿದ್ದರೆ, ಪ್ರಧಾನಿ ನರೇಂದ್ರ ಮೋದಿ ಕೋಟ್ಯಂತರ ಯುವಜನರಿಗೆ ಉದ್ಯೋಗಾವಕಾಶ ನೀಡಿ ಬದುಕು ಕಟ್ಟಿಕೊಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರ ಯುವನಿಧಿ ಗ್ಯಾರಂಟಿ ಯೋಜನೆಯಡಿ ಎಲ್ಲ ನಿರುದ್ಯೋಗಿಗಳಿಗೆ ಹಣ ನೀಡುವುದಾಗಿ ತಿಳಿಸಿತ್ತು.
ಆದರೆ ನಂತರ ಬಹಳ *ತಡವಾಗಿ ಯೋಜನೆ ಜಾರಿ ಮಾಡಿ* ಅನೇಕ ಷರತ್ತುಗಳನ್ನು ಹಾಕಿ ಎಲ್ಲ ಯುವಜನರಿಗೆ ಅದರ ಪ್ರಯೋಜನ ಸಿಗದಂತೆ ಮಾಡಿದೆ. ಆದರೆ ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಕೋಟ್ಯಂತರ ಯುವಜನರಿಗೆ ಕೌಶಲ್ಯ ತರಬೇತಿ ಮತ್ತು ಉದ್ಯೋಗಾವಕಾಶ ನೀಡಿದ್ದಾರೆ. ಇದೇ ಮೋದಿ ಗ್ಯಾರಂಟಿ ಎಂದರು.9 ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದ ದೇಶಾದ್ಯಂತ 5,000 ಹೊಸ ಐಟಿಐ ಸಂಸ್ಥೆಗಳು ನಿರ್ಮಾಣವಾಗಿದೆ. *4 ಲಕ್ಷಕ್ಕೂ ಹೆಚ್ಚು* ಹೊಸ ಐಟಿಐ ಸೀಟುಗಳನ್ನು ಸೃಷ್ಟಿಸಲಾಗಿದೆ.
ರಾಷ್ಟ್ರೀಯ ಶಿಕ್ಷಣ ನೀತಿ-2020 ರಲ್ಲಿ 6 ನೇ ತರಗತಿಯಿಂದಲೇ ಕೌಶಲ್ಯ ತರಬೇತಿ ನೀಡಲಾಗುತ್ತಿದೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಈ ನೀತಿಯ ಜಾರಿಗೆ ಅವಕಾಶ ನೀಡುತ್ತಿಲ್ಲ. 2014 ಕ್ಕೆ ಹೋಲಿಸಿದರೆ 8 ರಷ್ಟಿದ್ದ ಏಮ್ಸ್ಗಳು 23 ಕ್ಕೆ ಏರಿಕೆಯಾಗಿದೆ. 7 ಐಐಟಿ, 8 ಐಐಎಂ ಮತ್ತು 350 ವಿಶ್ವವಿದ್ಯಾಲಯಗಳ ಸ್ಥಾಪನೆಯಾಗಿದೆ ಎಂದು ವಿವರಿಸಿದರು.1.50 ಕೋಟಿ ಯುವಜನರಿಗೆ ತರಬೇತಿ: ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆಯಡಿ 1.50 ಕೋಟಿ ಯುವಜನರಿಗೆ ತರಬೇತಿ* ನೀಡಿ ಉದ್ಯೋಗಾವಕಾಶ ಸೃಷ್ಟಿಸಲಾಗಿದೆ. ರೋಜ್ಗಾರ್ ಮೇಳ ಯೋಜನೆಯಡಿ 2024 ರ ಫೆಬ್ರವರಿ 13 ರಂದು ಒಂದೇ ದಿನ *1 ಲಕ್ಷ ಜನರಿಗೆ ನೇಮಕಾತಿ ಪತ್ರ* ವಿತರಿಸಲಾಗಿದೆ.
ಈವರೆಗೆ 10 ರೋಜ್ಗಾರ್ ಮೇಳಗಳನ್ನು ನಡೆಸಿದ್ದು, 6.5 ಲಕ್ಷ ಯುವಜನರಿಗೆ ಉದ್ಯೋಗ ದೊರೆತಿದೆ. ನವೋದ್ಯಮಗಳ ಪೆÇ್ರೀತ್ಸಾಹಕ್ಕೆ ಸ್ಟಾರ್ಟ್ ಅಪ್ ಇಂಡಿಯಾ ಯೋಜನೆ ಆರಂಭಿಸಿದ್ದು, 10 ಲಕ್ಷ ನೇರ ಉದ್ಯೋಗಗಳು ಇದರಿಂದ ಸೃಷ್ಟಿಯಾಗಿದೆ. 2023 ರ ಡಿಸೆಂಬರ್ವರೆಗೆ 1.16 ಲಕ್ಷ ನವೋದ್ಯಮಗಳು ದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ. 2017-2021 ರ ನಡುವೆ ಟೆಕ್ ಸ್ಟಾರ್ಟ್ ಅಪ್ಗಳು 23 ಲಕ್ಷ ನೇರ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿಸಿದೆ ಎಂದು ನಾಸ್ಕಾಮ್ ಅಧ್ಯಯನ ತಿಳಿಸಿದೆ ಎಂದು ಡಾ.ಕೆ.ಸುಧಾಕರ್ ಹೇಳಿದರು.
ಯುವಜನರಿಗೆ ಗ್ಯಾರಂಟಿಗಳ ನಡುವಿನ ವ್ಯತ್ಯಾಸ ಚೆನ್ನಾಗಿ ಅರಿವಿದೆ. ಕಾಂಗ್ರೆಸ್ ನೀಡುತ್ತಿರುವ ಗ್ಯಾರಂಟಿ ತಾತ್ಕಾಲಿಕವಾಗಿದ್ದು, ಇದು ಬದುಕನ್ನು ಶಾಶ್ವತವಾಗಿ ಕಟ್ಟಿಕೊಡುವುದಿಲ್ಲ. ಆದರೆ ಮೋದಿ ಗ್ಯಾರಂಟಿ ದೂರದೃಷ್ಟಿಯ ಗುರಿಗಳನ್ನು ಹೊಂದಿದೆ. ಇದು ಯುವಜನತೆಗೆ ಹೆಚ್ಚು ಅರಿವಿದೆ. ಹೀಗಾಗಿ ಈ ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಯುವಜನರು ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆಂಬಲ ನೀಡಲಿದ್ದಾರೆ ಎಂದರು.
ಕ್ಷೇತ್ರದಲ್ಲಿ ಉದ್ಯೋಗಾವಕಾಶ: ಚಿಕ್ಕಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ಮೊದಲಾದ ಸ್ಥಳಗಳನ್ನು ಬೆಂಗಳೂರಿಗೆ ಪರ್ಯಾಯವಾಗಿ ಉಪನಗರಗಳಾಗಿ ಬೆಳೆಸಲಾಗುವುದು. ಈ ಭಾಗಗಳಲ್ಲಿ ಹೊಸ ಉದ್ಯಮಗಳ ಸ್ಥಾಪನೆ ಮಾಡಿ ಹೆಚ್ಚು ಉದ್ಯೋಗವಾಕಾಶ ಕಲ್ಪಿಸಲಾಗುವುದು. ಇದರಿಂದ ಬೆಂಗಳೂರು ನಗರದ ಮೇಲಿನ ಒತ್ತಡ ಕಡಿಮೆಯಾಗಿ ಈ ಭಾಗಗಳ ಯುವಜನರಿಗೆ *ಸ್ಥಳೀಯವಾಗಿಯೇ ಉದ್ಯೋಗ ಮಾಡಲು ಅವಕಾಶ* ದೊರೆಯಲಿದೆ ಎಂದು ತಿಳಿಸಿದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಹೊಸ ಕೈಗಾರಿಕೆ ಹಾಗೂ ಉದ್ಯಮಗಳನ್ನು ಆರಂಭಿಸುವ ಮೂಲಕ ಯುವಜನರಿಗೆ ಹೆಚ್ಚು ಉದ್ಯೋಗ ಕಲ್ಪಿಸಲು ಸಾಧ್ಯವಿದೆ. ಕೇಂದ್ರ ಸರ್ಕಾರದಿಂದ ಹೆಚ್ಚು ಅನುದಾನ ತಂದು ಉದ್ಯಮಗಳನ್ನು ಸ್ಥಾಪಿಸಿ ಉದ್ಯೋಗವಾಕಾಶ ಸೃಷ್ಟಿಸಲಾಗುವುದು ಎಂದು ಭರವಸೆ ನೀಡಿದರು.