ಬೆಂಗಳೂರು: ಆಸ್ತಿ ವಿವರ ಸಲ್ಲಿಸದ ಕರ್ನಾಟಕದ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರ ಪಟ್ಟಿಯನ್ನು ಲೋಕಾಯುಕ್ತ ಬಹಿರಂಗಡಿಸಿದೆ.
ಆಯ್ಕೆಯಾದ ಮೂರು ತಿಂಗಳೊಳಗೆ ಸದಸ್ಯರು ತಮ್ಮ ಆಸ್ತಿ ವಿವರವನ್ನು ಲೋಕಾಯುಕ್ತಕ್ಕೆ ಸಲ್ಲಿಸಬೇಕೆಂಬ ನಿಯಮ ಇದೆ. ಆದ್ರೆ, ಶಾಸಕರು ಹಾಗೂ ಪರಿಷತ್ ಸದಸ್ಯರು ಇದುವರೆಗೂ ಲೋಕಾಯುಕ್ತ ಕಚೇರಿಗೆ ಆಸ್ತಿ ವಿವರವನ್ನು ಸಲ್ಲಿಸಿಲ್ಲ. ಇದೀಗ ಅಂತಿಮವಾಗಿ ಲೋಕಾಯುಕ್ತ, ಆಸ್ತಿ ವಿವರ ಸಲ್ಲಿಸದ ಶಾಸಕರುಗಳ ಹೆಸರುಗಳ ಪಟ್ಟಿಯನ್ನು ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ.
ಕಳೆದ ಬಾರಿ ಸಚಿವರಾಗಿದ್ದ ಶ್ರೀರಾಮುಲು, ಕೆಸಿ ನಾರಾಯಣಗೌಡ, ಎಸ್ ಅಂಗಾರ ಆಸ್ತಿ ವಿವರ ಸಲ್ಲಿಸದೇ ನಿಮಯ ಉಲ್ಲಂಘಿಸಿದ್ದರು. ಈ ಬಾರಿ ರಹೀಂ ಖಾನ್, ಕೆ ಎನ್ ರಾಜಣ್ಣ, ಜಮೀರ್ ಅಹಮದ್ ಖಾನ್, ರಾಮಲಿಂಗರೆಡ್ಡಿ, ಕೆ ಎಚ್ ಮುನಿಯಪ್ಪ ಅವರು ಸಹ ಆಸ್ತಿ ವಿವರ ಸಲ್ಲಿಸಿಲ್ಲ. ಹೀಗೆ ಕಳೆದ ವಿಧಾನಸಭೆ ಅವಧಿಯ 81 ಮಂದಿ ಶಾಸಕರಿಂದ ಆಸ್ತಿ ವಿವರ ಸಲ್ಲಿಸದೇ ಲೋಪ ಎಸಗಿದ್ದಾರೆ ಎಂದು ಹೇಳಲಾಗಿದೆ.
ಈ ಬಾರಿ ಅಂದರೆ 2023ರಲ್ಲಿ ನಡೆದ ಕರ್ನಾಟಕ ವಿಧಾನಸಭೆ ಅವಧಿಯ 51 ಮಂದಿ ಶಾಸಕರ ಆಸ್ತಿ ವಿವರ ಸಲ್ಲಿಕೆ ಆಗಿಲ್ಲ. ಹಾಗೇ 21 ವಿಧಾನ ಪರಿಷತ್ ಸದಸ್ಯರು ಸಹ ಆಸ್ತಿ ವಿವರ ಸಲ್ಲಿಕೆ ಮಾಡಿಲ್ಲ. ಇನ್ನುಸಚಿವ ಮಧು ಬಂಗಾರಪ್ಪ ಹಾಗೂ ಮಾಜಿ ಸಚಿವ ಮುರಿಗೇಶ್ ನಿರಾಣಿ ಸೇರಿದಂತೆ ಹಲವು ಗಡುವು ಮುಗಿದ ಅಂದರೆ ಜೂನ್ 30 ರ ಬಳಿಕ ಆಸ್ತಿ ವಿವರ ಸಲ್ಲಿಕೆ ಮಾಡಿದ್ದಾರೆ. ಅವಧಿ ಮುಗಿದ ಬಳಿಕ 10 ಶಾಸಕರು, ಓರ್ವ ವಿಧಾನ ಪರಿಷತ್ ಸದಸ್ಯ ಆಸ್ತಿ ವಿವರ ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.