ಬೆಂಗಳೂರು: ಭ್ರಷ್ಟಾಚಾರ ವಿರುದ್ಧ ಸಮರ ಸಾರುವ, ಲೋಕಾಯುಕ್ತ ಅಧಿಕಾರಿಗಳು ಇನ್ನಷ್ಟು ಸ್ಮಾರ್ಟ್ ಆಗಲಿದ್ದಾರೆ.ಲಂಚ ಪ್ರಕರಣಗಳ ತ್ವರಿತ ತನಿಖೆಗೆ ಪೂರಕವಾದ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿರುವ ಲೋಕಾಯುಕ್ತದಲ್ಲಿ ಕಾರ್ಯನಿರ್ವಹಿಸುತ್ತಿರುವ ಇನ್ಸ್ಪೆಕ್ಟರ್ ಸೇರಿದಂತೆ ಮೇಲಿನ ಅಧಿಕಾರಿಗಳಿಗೆ ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್ ಸಹಿತ ಹೊಸ ಸಮವಸ್ತ್ರ ನೀಡಲಾಗಿದೆ.
ಇನ್ಸ್ಪೆಕ್ಟರ್, ಡಿವೈಎಸ್ಪಿ ಹಾಗೂ ಎಸ್ಪಿ ಸೇರಿ 175 ಮಂದಿ ಅಧಿಕಾರಿಗಳಿಗೆ ಸ್ಯಾಮ್ಸಂಗ್ ಕಂಪನಿಯ ಸ್ಮಾರ್ಟ್ ಮೊಬೈಲ್ ಗಳನ್ನು ಈಗಾಗಲೇ ವಿತರಿಸಲಾಗಿದೆ. ಇದಕ್ಕೂ ಮುನ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದು ಸಮನ್ವಯತೆ ಸಾಧಿಸಲು ವೈಯಕ್ತಿಕ ಮೊಬೈಲ್ ಬಳಸುತ್ತಿದ್ದ ಅಧಿಕಾರಿಗಳು ಇದೀಗ ಲೋಕಾಯುಕ್ತ ಇಲಾಖೆಯಿಂದ ಮೊಬೈಲ್ ನೀಡಿರುವುದರಿಂದ ತನಿಖೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಸಹಕಾರಿಯಾಗಲಿದೆ.
ಡಿಜಿಟಲ್ ಸಾಕ್ಷ್ಯಕ್ಕೆ ನೆರವು:ದಾಳಿ ಅಥವಾ ಟ್ರ್ಯಾಪ್ ಕಾರ್ಯಾಚರಣೆ ಪ್ರಕರಣಗಳಲ್ಲಿ ಬಂಧಿತರಾಗುವವರಿಗೆ ಆಥವಾ ಆರೋಪಿತರಿಗೆ ದಾಖಲಾತಿ ಸಲ್ಲಿಕೆ ಹಾಗೂ ವಿಚಾರಣೆ ಹಾಜರಾಗುವಂತೆ ಸೇರಿದಂತೆ ವಿವಿಧ ಆರೋಪಗಳಿಗೆ ಸಂಬಂಧಿಸಿದಂತೆ ವಾಟ್ಸ್ ಆ್ಯಪ್ ಮೂಲಕ ನೊಟೀಸ್ ಕಳುಹಿಸಲು ಸ್ಮಾರ್ಟ್ ಮೊಬೈಲ್ ಪೂರಕವಾಗಿರಲಿದೆ.
ಡಿಜಿಟಲ್ ಸಾಕ್ಷ್ಯಾಧಾರ ಸಂಗ್ರಹಿಸಲು ಅಥವಾ ಪರಿಶೀಲಿಸಲು ನೆರವಿಗೆ ಬರಲಿದೆ.ಅಲ್ಲದೇ ಎಫ್ಐಆರ್ ದಾಖಲಿಸಲು ಇನ್ನಿತರ ಕೇಸ್ಗಳಿಗೆ ಸಂಬಂಧಿಸಿದಂತೆ ಬಳಸಲು ಅಗತ್ಯವಿರುವ ಅಧಿಕಾರಿಗಳಿಗೆ 108 ಕಂಪ್ಯೂಟರ್ ಹಾಗೂ 30 ಲ್ಯಾಪ್ ಟಾಪ್ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಮವಸ್ತ್ರ ಕಡ್ಡಾಯ:
ಎನ್ಐಎ ಹಾಗೂ ನಗರ ಸಿಸಿಬಿ ಮಾದರಿಯಲ್ಲಿ ಲೋಕಾಯುಕ್ತ ಪೊಲೀಸರಿಗೂ ಸಮವಸ್ತ್ರ ನೀಡಲಾಗಿದ್ದು, ಜಾಕೆಟ್ ಮೇಲೆ ಕರ್ನಾಟಕ ಲೋಕಾಯುಕ್ತ ಎಂದು ನಮೂದಿಸಲಾಗಿದೆ. ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ದಾಳಿ ಸಂದರ್ಭಗಳಲ್ಲಿ ಕಡ್ಡಾಯವಾಗಿ ಸಮವಸ್ತ್ರ ಧರಿಸಿಬೇಕು ಎಂದು ಲೋಕಾಯುಕ್ತರು ಸೂಚಿಸಿದ್ದಾರೆ.
ಹಲವು ಸಂದರ್ಭಗಳಲ್ಲಿ ದಾಳಿ ನಡೆಸಿದಾಗ ಅಧಿಕಾರಿಗಳೇ ಬಂದಿದ್ದರೂ ದಾಳಿಗೊಳಗಾದ ಅಧಿಕಾರಿ ಅಥವಾ ಕುಟುಂಬಸ್ಥರು ಸಹಕರಿಸುತ್ತಿರಲಿಲ್ಲ. ಎಷ್ಟೋ ಬಾರಿ ಮಾತಿನ ಚಕಮಕಿಗಳು ಸಹ ನಡೆದಿರುವ ಉದಾಹರಣೆಗಳಿವೆ. ಹೀಗಾಗಿ ಇಂತಹ ಗೋಡವೆಗಳಿಂದ ದೂರವಾಗಿಸಲು ಹಾಗೂ ಶಿಸ್ತು ಕಾಪಾಡಿಕೊಳ್ಳಲು ಎಲ್ಲ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಸಮವಸ್ತ್ರ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.