ಬೆಂಗಳೂರು: ಇದೀಗ ಇಡೀ ದೇಶ ಮತ್ತು ಕರ್ನಾಟಕದಲ್ಲಿ ಮೋದಿ ಮತ್ತೊಮ್ಮೆ ಎಂಬ ವಾತಾವರಣವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ವಿಶ್ಲೇಷಿಸಿದ್ದಾರೆ.ಭೂಪಸಂದ್ರ ಮುಖ್ಯರಸ್ತೆ, ಸಂಜಯನಗರದಲ್ಲಿ ಇಂದು ಹೆಬ್ಬಾಳ ಮಂಡಲ ಕಾರ್ಯಾಲಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಜ್ಯದ 28 ಕ್ಷೇತ್ರಗಳಲ್ಲಿ ಯಾವುದೇ ಕ್ಷೇತ್ರದಲ್ಲೂ ಬಿಜೆಪಿಗೆ ಹಿನ್ನಡೆ ಎಂಬ ವಾತಾವರಣ ಇಲ್ಲ. 28ರಲ್ಲಿ 28 ಕ್ಷೇತ್ರಗಳಲ್ಲೂ ಬಿಜೆಪಿ ಮುನ್ನಡೆ ಎಂಬ ವಾತಾವರಣ ನಿರ್ಮಾಣವಾಗಿದೆ. ನರೇಂದ್ರ ಮೋದಿಯವರ ಜನಪ್ರಿಯತೆ, ಕೇಂದ್ರ ಸರಕಾರದ ದಕ್ಷ ಆಡಳಿತವು ಇದಕ್ಕೆ ಕಾರಣ ಎಂದು ವಿವರಿಸಿದರು.
ಈ ಕ್ಷೇತ್ರದಿಂದ ಬಿಜೆಪಿ ಅತ್ಯಧಿಕ ಮತಗಳಿಂದ ಜಯಭೇರಿ ಬಾರಿಸಲು ನಾವೆಲ್ಲರೂ ಸಹ ಒಗ್ಗಟ್ಟಾಗಿ, ಒಂದಾಗಿ ದುಡಿಯೋಣ. ನಾವು ಪ್ರತಿಯೊಬ್ಬರೂ ನಾವೇ ನರೇಂದ್ರ ಮೋದಿಜೀ ಎಂಬಂತೆ ಭಾವಿಸಿಕೊಂಡು ಕಾರ್ಯಕರ್ತರಾಗಿ ಶಕ್ತಿಯನ್ನು ಹಾಕೋಣ ಎಂದು ಹುರಿದುಂಬಿಸಿದರು.
ಕೇಂದ್ರದಲ್ಲಿ ಬಿಜೆಪಿ 3ನೇ ಬಾರಿ ಅಧಿಕಾರಕ್ಕೆ ಬಂದು ನರೇಂದ್ರ ಮೋದಿಯವರು 3ನೇ ಬಾರಿ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಪಡೆಯುವಂಥ ಶುಭ ನಿರೀಕ್ಷೆಯಲ್ಲಿ ನಾವೆಲ್ಲರೂ ಇದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ನಮ್ಮ ಮುಂದೆ ಲೋಕಸಭಾ ಚುನಾವಣೆಯ ಬಹುದೊಡ್ಡ ಸವಾಲಿದೆ.
ಯಾವುದೇ ಕ್ಷಣದಲ್ಲಿ ಲೋಕಸಭಾ ಚುನಾವಣೆ ಘೋಷಣೆ ಆಗುವ ಸಂದರ್ಭದಲ್ಲಿ ನಾವಿದ್ದೇವೆ ಎಂದು ತಿಳಿಸಿದರು. 8 ತಿಂಗಳ ಹಿಂದೆ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆ ಸಂದರ್ಭದಲ್ಲಿ ನಾವು ನಿರೀಕ್ಷೆ ಮಾಡದೆ ಇದ್ದರೂ ಸಾಕಷ್ಟು ಹಿನ್ನಡೆ ಆಗಿತ್ತು. ಆಡಳಿತ ಪಕ್ಷದಲ್ಲಿ ಇದ್ದವರು 66 ಸ್ಥಾನ ಗೆದ್ದು ವಿರೋಧ ಪಕ್ಷದ ಸ್ಥಾನದಲ್ಲಿ ನಾವು ಕೂತಿದ್ದೇವೆ. ಆದರೆ, ಈಗ ಮೋದಿ ಮತ್ತೊಮ್ಮೆ ಎಂಬ ವಾತಾವರಣ ಇದೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಡಿ.ವಿ. ಸದಾನಂದಗೌಡ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಸಹ-ಸಂಚಾಲಕ ಸಚ್ಚಿದಾನಂದಮೂರ್ತಿ, ಮಂಡಲ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಪಕ್ಷದ ಮುಖಂಡರು ಭಾಗವಹಿಸಿದ್ದರು.