ಬೆಂಗಳೂರು: `ಇಂಡಿಯಾ’ ಒಕ್ಕೂಟ ರಚನೆಯಾದಾಗಿನಿಂದ ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳ ಮುಖಂಡರನ್ನು ಹತ್ತಿಕ್ಕುವ ಪ್ರಯತ್ನ ನಡೆಸಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಸುಳ್ಳು ಆರೋಪದಡಿ ಬಂಧಿಸಿರುವುದಲ್ಲದೆ ಜೈಲಿನಲ್ಲಿಯೇ ಅವರನ್ನು ಮುಗಿಸುವ ಸಂಚು ರೂಪಿಸಿದ್ದಾರೆ.
ಸಕ್ಕರೆ ಕಾಯಿಲೆ ಇರುವ ಕೇಜ್ರಿವಾಲ್ ಅವರಿಗೆ ಅಗತ್ಯ ದೈನಂದಿನ ಇನ್ಸುಲಿನ್ ಕೊಡಲು ನೂರಾರು ತಕರಾರುಗಳನ್ನು ಮಾಡುವ ಮೂಲಕ ಅವರನ್ನು ಹತ್ಯೆ ಮಾಡಲು ಪಿತೂರಿ ನಡೆಸಿದ್ದಾರೆ ಎಂದು ಡಾ. ಮುಖ್ಯಮಂತ್ರಿ ಚಂದ್ರು ಗಂಭೀರ ಆರೋಪ ಮಾಡಿದ್ದಾರೆ.ನಗರದಲ್ಲಿ ಮಂಗಳವಾರ `ಇಂಡಿಯಾ’ ಒಕ್ಕೂಟದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸೌಮ್ಯ ರೆಡ್ಡಿ ಪರ ನಗರದ ಎಚ್ಎಸ್ಆರ್ ಬಡಾವಣೆಯ ವಾಜಪೀ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಕೇಂದ್ರದ ನಾಯಕಿ ಪ್ರಿಯಾಂಕ ಗಾಂಧಿ ಭಾಗವಹಿಸಿದ್ದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಮಾತನಾಡುತ್ತ,
ಅರವಿಂದ ಕೇಜ್ರಿವಾಲ್ ಅವರ ಆರೋಗ್ಯದ ಕುರಿತು ಅತೀವ ನಿರ್ಲಕ್ಷ್ಯವಹಿಸಲಾಗುತ್ತಿದೆ. ಔಷಧಗಳನ್ನು ತೆಗೆದುಕೊಳ್ಳಲು ಬಿಡುತ್ತಿಲ್ಲ. ನಾವು ದೇಶದಲ್ಲಿ ಜೀವಿಸುತ್ತಿದ್ದೇವೆ? ಹಿಟ್ಲಾರ್, ಮುಸಲೋನಿಯರ ದೇಶದಲ್ಲಿ ಬದುಕುತ್ತಿದ್ದೇವೆಯೇ? ಮೋದಿಯವರು ಎಲ್ಲಾ ಸ್ವತಂತ್ರ ಸಂಸ್ಥೆಗಳನ್ನು ತನಗೆ ಅನುಕೂಲವಾಗುವ ರೀತಿಯಲ್ಲಿ ಮಾರ್ಪಡಿಸಿಕೊಂಡಿದ್ದಾರೆ. ಭಾರತ ಇಂದು ಅಪಾಯದಲ್ಲಿದೆ. ಈ ಬಾರಿ ಪ್ರತಿಯೊಬ್ಬ ಮತದಾರನು ದೇಶದ ರಕ್ಷಣೆಯ ದೃಷ್ಟಿಯಿಂದ ಮತ ನೀಡಬೇಕು ಎಂದು ಕರೆ ನೀಡಿದರು.
ಪ್ರಜಾಪ್ರಭುತ್ವದಡಿ, ಸಾಂವಿಧಾನಿಕ ನೆಲೆಯಲ್ಲಿ ಧೈರ್ಯವಾಗಿ ಚುನಾವಣೆ ಎದುರಿಸಲು ಹೆದರುತ್ತಿರುವ ನರೇಂದ್ರ ಮೋದಿ ಅನೇಕ ಕಳ್ಳ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಇಡಿ, ತೆರಿಗೆ ಇಲಾಖೆಗಳ ಮೂಲಕ ಪ್ರತಿಪಕ್ಷಗಳ ಮುಖಂಡರನ್ನು ಕಟ್ಟಿಹಾಕುತ್ತಿದ್ದಾರೆ. ಮೋದಿ, ಶಾ ಆಟ ಹೆಚ್ಚು ದಿನ ನಡೆಯುವುದಿಲ್ಲ ಎಂದರು.ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ರಾಷ್ಟ್ರೀಯ ಮುಖಂಡರಾದ ಪ್ರಿಯಾಂಕಾ ಗಾಂಧಿ, ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಸೌಮ್ಯ ರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.