ನವದೆಹಲಿ: ಭಾರತದಲ್ಲಿ ಮಹಿಳೆಯರು ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ಮುಕ್ತರಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಉದ್ಯಮಿ, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಜತೆ ಸಂವಾದ ನಡೆಸಿದ ಅವರು, ಭಾರತದಲ್ಲಿ ಡಿಜಿಟಲ್ ಕ್ರಾಂತಿಯ ಬಗ್ಗೆ ಚರ್ಚಿಸಿದರು. ಇದೇ ವೇಳೆ, ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಸ್ಥಾಪಿಸುವ ಮಹತ್ವಾಕಾಂಕ್ಷೆಯನ್ನು ಮೋದಿ ವ್ಯಕ್ತಪಡಿಸಿದ್ದಾರೆ.
ಉಭಯ ನಾಯಕರ ಸಂವಾದದ ಪ್ರೋಮೋವನ್ನು ಗುರುವಾರ ಬಿಡುಗಡೆ ಮಾಡಲಾಗಿತ್ತು. ಇದೀಗ ಸಂವಾದದ ಪೂರ್ತಿ ವಿಡಿಯೋ ಬಿಡುಗಡೆಯಾಗಿದೆ. ಪ್ರಧಾನಿ ಮೋದಿ ಸಹ ಎಕ್ಸ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಬಿಲ್ ಗೇಟ್ಸ್ ಜತೆಗೆ ಒಳನೋಟವುಳ್ಳ ಒಂದು ಸಂವಾದ. ದಯವಿಟ್ಟು ನೋಡಿ ಎಂದು ಎಕ್ಸ್ ಪೋಸ್ಟ್ನಲ್ಲಿ ಮೋದಿ ಉಲ್ಲೇಖಿಸಿದ್ದಾರೆ.
ಸಂವಾದದಲ್ಲಿ ಕೃತಕ ಬುದ್ಧಿಮತ್ತೆ ಕುರಿತು ಮಾತನಾಡಿದ ಮೋದಿ, ಎಐ ಜಾಗತಿಕವಾಗಿ ಸಾಕಷ್ಟು ಸವಾಲುಗಳನ್ನು ಸೃಷ್ಟಿಸುತ್ತಿದೆ ಎಂದು ಬಿಲ್ ಗೇಟ್ಸ್ಗೆ ವಿವರಿಸಿದರು. ಜತೆಗೆ ಎಐ ವ್ಯವಸ್ಥೆಗಳಿಗೆ ಸಮಗ್ರ ತರಬೇತಿಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. ಅಲ್ಲದೆ, ಎಐಯಿಂದ ರಚಿತವಾದುದಕ್ಕೆ ವಾಟರ್ಮಾರ್ಕ್ ಸೇರಿಸುವ ಕಲ್ಪನೆಯನ್ನು ಪ್ರಸ್ತಾಪಿಸಿದರು.
ಡೀಪ್ಫೇಕ್ ತಂತ್ರಜ್ಞಾನ ವಂಚನೆಗೆ ಹೆಚ್ಚು ಬಳಕೆಯಾಗುವ ಸಾಧ್ಯತೆ ಬಗ್ಗೆ ಮೋದಿ ಎಚ್ಚರಿಕೆ ನೀಡಿದರು. ಈ ಬಗ್ಗೆ ಗಮನಹರಿಸುವ ಮತ್ತು ಅದರ ಸಂಪೂರ್ಣ ಮೂಲವನ್ನು ಪತ್ತೆಹಚ್ಚಲು ಬೇಕಾದ ವ್ಯವಸ್ಥೆ ರೂಪಿಸುವ ಅಗತ್ಯವನ್ನು ಒತ್ತಿ ಹೇಳಿದರು. ಎಐ ಮತ್ತು ಡೀಪ್ಫೇಕ್ ತಂತ್ರಜ್ಞಾನವನ್ನು ನಿಯಂತ್ರಿಸಲು ಕಾನೂನು ಚೌಕಟ್ಟನ್ನು ರೂಪಿಸುವ ಬಗ್ಗೆಯೂ ಪ್ರತಿಪಾದಿಸಿದ್ದಾರೆ.
ಭಾರತದಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮಹಿಳೆಯರು ಹೆಚ್ಚು ಮುಕ್ತರಾಗಿದ್ದಾರೆ. ನಾನು `ನಮೋ ಡ್ರೋನ್ ದೀದಿ’ ಯೋಜನೆಯನ್ನು ಪ್ರಾರಂಭಿಸಿದ್ದೇನೆ. ಇದು ಅತ್ಯಂತ ಯಶಸ್ವಿಯಾಗಿ ಮನ್ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಜತೆ ಸಂವಹನ ನಡೆಸಿದ್ದೇನೆ, ಅವರು ಸಂತೋಷಪಡುತ್ತಾರೆ.
ಈ ಹಿಂದೆ ಸೈಕಲ್ ತುಳಿಯುವುದೇ ಕಷ್ಟ ಎನ್ನುತ್ತಿದ್ದ ಮಹಿಳೆಯರು ಈಗ ಪೈಲಟ್ಗಳು ಮತ್ತು ಡ್ರೋನ್ಗಳನ್ನು ಹಾರಿಸಬಲ್ಲರು. ಭಾರತದಲ್ಲಿ ಮನಃಸ್ಥಿತಿ ಬದಲಾಗಿದೆ ಎಂದು ಮೋದಿ ಹೇಳಿದ್ದಾರೆ.ಜಿ20 ಶೃಂಗಸಭೆ ಬಗ್ಗೆಯೂ ಪ್ರಧಾನಿ ಮೋದಿ, ಬಿಲ್ಗೇಟ್ಸ್ ನಡುವೆ ಸಂವಾದ ನಡೆಯಿತು. ಜಿ20 ಶೃಂಗಸಭೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇವೆ.
ಜಿ20 ಶೃಂಗಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನ ಕೈಗೊಳ್ಳಲಾಯಿತು. ಹವಾಮಾನ ವೈಪರೀತ್ಯ, ಭಯೋತ್ಪಾದನೆ ನಿರ್ಮೂಲನೆ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಯಿತು. ಜಿ20 ದೇಶಗಳ ನಡುವೆ ಸಂಬಂಧ ಸುಧಾರಣೆಗೆ ನಿರ್ಣಯಕೈಗೊಳ್ಳಲಾಯಿತು. ಆರ್ಥಿಕ ಸುಧಾರಣೆ, ರಕ್ಷಣೆ, ಶಿಕ್ಷಣ, ವ್ಯಾಪಾರ, ವಿಜ್ಞಾನ-ತಂತ್ರಜ್ಞಾನ, ಪ್ರವಾಸೋದ್ಯಮ, ಪರಿಸರ ಸಂರಕ್ಷಣೆ ಸೇರಿ ಹಲವು ಕ್ಷೇತ್ರಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಯೊತು. ಶೃಂಗಸಭೆಯಲ್ಲಿನ ನಿರ್ಣಯಗಳ ಅನುಷ್ಠಾನಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಮೋದಿ ತಿಳಿಸಿದ್ದಾರೆ.