ಶ್ರೀನಗರ: ಪ್ರಧಾನಿ ಮೋದಿ ಅವರ 2 ದಿನಗಳ ಜಮ್ಮು ಮತ್ತು ಕಾಶ್ಮೀರ ಪ್ರವಾಸ ಇಂದು ಆರಂಭವಾಗಲಿದೆ. 3ನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಜಮ್ಮು ಮತ್ತು ಕಾಶ್ಮೀರಕ್ಕೆ ಮೋದಿ ಅವರ ಮೊದಲ ಭೇಟಿಯೂ ಇದಾಗಿದೆ.
ಶ್ರೀನಗರದಲ್ಲಿ ನಾಳೆ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ.ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವ್ಯಾಪಕ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. ವಿವಿಧ ಹಂತಗಳಲ್ಲಿ ಭದ್ರತೆ ನಿಯೋಜಿಸಲಾಗಿದೆ.ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ದಾಖಲೆ ಪ್ರಮಾಣದ ಮತದಾನವಾಗಿದ್ದು, ಪ್ರಧಾನಿ ಅವರ ಈ ಭೇಟಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.
ಈ ಹಿನ್ನೆಲೆಯಲ್ಲಿ ಶಿಷ್ಟಾಚಾರದ ಪ್ರಕಾರ, ಹಲವು ಹಂತಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೂಗೊಳ್ಳಲಾಗಿದೆ ಎಂದು ಕಾಶ್ಮೀರ ವಲಯದ ಐಜಿಪಿ ವಿಧಿ ಕುಮಾರ್ ಬರ್ಡಿ ತಿಳಿಸಿದ್ದಾರೆ.ಭದ್ರತಾ ಕ್ರಮದ ಭಾಗವಾಗಿ ಶ್ರೀನಗರದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಡ್ರೋನ್ ಮತ್ತು ಕ್ವಾಡ್ಕಾಪ್ಟರ್ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಡ್ರೋನ್ ನಿಯಮಗಳು 2021ರ ನಿಬಂಧನೆಗಳ ಪ್ರಕಾರ ನಿಯಮ ಉಲ್ಲಂಘಿಸಿದವರಿಗೆ ದಂಡ ಹಾಗೂ ಶಿಕ್ಷೆ ವಿಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.