ಬೆಂಗಳೂರು: ದೇಶದ ಹೆಮ್ಮೆಯ ಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠಾಪನೆ ಸಂದರ್ಭದಲ್ಲಿ ನಗರದಲ್ಲಿರುವ ಆಮ್ ಆದ್ಮಿ ಪಕ್ಷದ ಕೇಂದ್ರ ಕಾರ್ಯಾಲಯದಲ್ಲಿ ರಾಮ ಭಜನೆ ಹಾಗೂ ಸುಂದರ ಕಾಂಡ ಸ್ತೋತ್ರ ಪಠಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಆಮ್ ಆದ್ಮಿ ಪಕ್ಷದ ಮುಖಂಡರು, ನಾಯಕರು ಶ್ರದ್ಧಾಭಕ್ತಿಯಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾಮನಿಗೆ ಪೂಜೆ ಸಲ್ಲಿಸಿದರು. ರಾಮನ ಭಜನೆ ಮತ್ತು ಸ್ತೋತ್ರವನ್ನು ಎಲ್ಲರೂ ಪಠಿಸುವ ಮೂಲಕ ಅಯೋಧ್ಯೆ ರಾಮನಿಗೆ ಪ್ರಾರ್ಥನೆ ಸಲ್ಲಿಸಿದರು.
ಪೂಜೆಯ ಬಳಿಕ ಆಮ್ ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಮಾತನಾಡಿ, ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರಾಮನ ಪ್ರತಿಷ್ಠಾಪನೆ ಮಾಡಿದ್ದಾರೆ. ಆದರೆ ರಾಮ ರಾಜ್ಯ ನಿರ್ಮಾಣ ಮಾಡುವುದು ಆಮ್ ಆದ್ಮಿ ಪಕ್ಷದಿಂದ ಮಾತ್ರ ಸಾಧ್ಯ ಎಂದರು.
ಎಲ್ಲರಿಗೂ ಉತ್ತಮ ಶಿಕ್ಷಣ, ಆರೋಗ್ಯ ಸಿಗಬೇಕು. ಬಡತನ ಇರಲೇಬಾರದು, ಯಾರು ಹಸಿವಿನಿಂದ ಸಾಯಬಾರದು. ಎಲ್ಲರೂ ಸುಖಶಾಂತಿಯಿಂದ ಬದುಕಬೇಕು ಎನ್ನುವುದೇ ರಾಮರಾಜ್ಯದ ಕಲ್ಪನೆಯಾಗಿದೆ. ಈಗಾಗಲೇ ದೆಹಲಿ ಮತ್ತು ಪಂಜಾಬ್ನಲ್ಲಿ ರಾಮ ರಾಜ್ಯ ನಿರ್ಮಾಣ ಮಾಡಲಾಗಿದೆ. ಇಡೀ ದೇಶದಲ್ಲಿ ರಾಮ ರಾಜ್ಯ ನಿರ್ಮಾಣ ಮಾಡಲು ಆಮ್ ಆದ್ಮಿ ಪಕ್ಷ ಪಣ ತೊಟ್ಟಿದೆ. ಅದಕ್ಕಾಗಿ ಈ ಕಾರ್ಯಕ್ರಮಗಳನ್ನು ನೆರವೇರಿಸಲಾಗಿದೆ ಎಂದು ಹೇಳಿದರು.
500 ವರ್ಷಗಳ ಕನಸು ನನಸಾಗುತ್ತಿದೆ. ದೇಶಾದ್ಯಂತ ಸಂಭ್ರಮ ಮನೆ ಮಾಡಿದೆ. ಕರ್ನಾಟಕ ಕೂಡ ರಾಮರಾಜ್ಯದಂತೆ ಆಗಬೇಕು. ಆಮ್ ಆದ್ಮಿ ಪಕ್ಷದಿಂದ ಮಾತ್ರ ಅದನ್ನು ಮಾಡಲು ಸಾಧ್ಯ ಎಂದರು. ರಾಮ ಹಾಕಿಕೊಟ್ಟ ಹಾದಿಯಲ್ಲಿ ಎಲ್ಲರೂ ನಡೆಯಬೇಕು ಎಂದರು.