ಬೆಂಗಳೂರು: ತಾವು 17 ಬಾರಿ ಬಜೆಟ್ ಮಂಡಿಸಿದ್ದು, ಈ ಬಾರಿ ಬಜೆಟ್ ಮೇಲಿನ ಚರ್ಚೆಯಲ್ಲಿ ಹೆಚ್ಚು ಜನ ಶಾಸಕರು ಪಾಲ್ಗೊಂಡು ಮಾತನಾಡಿದ್ದಾರೆ ಎಂದು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇಂದು ವಿಧಾನಸಭೆಯಲ್ಲಿ ಬಜೆಟ್ ಕುರಿತು ನಡೆದ ಚರ್ಚೆಯ ಮೇಲಿನ ಉತ್ತರ ನೀಡಲು ಆರಂಭಿಸಿದ ಅವರು, 21 ಜನ ವಿರೋಧಪಕ್ಷದವರು ,ಆಡಳಿತ ಪಕ್ಷದವರು ಜೆಡಿಎಸ್ ಹಾಗೂ ಉಳಿದವರು ಸೇರಿದಂತೆ ಒಟ್ಟು 50 ಜನ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ್ದಾರೆ. ಇವರಿಗೆ ಮಾತನಾಡಲು ಅವಕಾಶ ನೀಡಿದ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹಾಗೂ ಬಜೆಟ್ನ್ನು ಟೀಕೆ, ಸ್ವಾಗತ, ವಿಮರ್ಶೆ ಮಾಡಿದ ಎಲ್ಲರಿಗೂ ನನ್ನ ಅಭಿನಂದನೆಗಳು ಎಂದು ಸಿಎಂ ತಿಳಿಸಿದ್ದಾರೆ.ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರು ಬಜೆಟ್ ಮೇಲೆ ಮಾತನಾಡಬೇಕಾದರೆ ತಮ್ಮ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಬರಲಿ ಎಂದು ಮಾತಿನಲ್ಲಿ ಪದಪುಂಜಗಳ ಬಳಕೆಗೆ ಹೆಚ್ಚಿನ ಹೊತ್ತು ನೀಡಿದ್ದಾರೆ. ಅವರು ಆಳವಾಗಿ ಬಜೆಟ್ ಆಯವ್ಯಯದ ಬಗ್ಗೆ ಸ್ಥೂಲವಾಗಿ ಅಧ್ಯಯನ ಮಾಡದೇ, ಪ್ರತಿಕ್ರಿಯೆ ನೀಡಿದ್ದಾರೆಯೇ ಹೊರತು, ಆಳವಾದ ಅಧ್ಯಯನ ನಡೆಸಿಲ್ಲ ಎಂದು ಕಂಡುಬರುತ್ತದೆ. ವಿರೋಧಪಕ್ಷದವರು ಬಜೆಟ್ ನ್ನು ಎಷ್ಟೇ ಟೀಕಿಸಿದರೂ, ಮಾವಿನ ಹಣ್ಣು ಬೇವಿನ ಹಣ್ಣು ಆಗಲು ಸಾಧ್ಯವಿಲ್ಲ.ಬಜೆಟ್ ಖಾಲಿ ಚೊಂಬು ಎಂಬ ಟೀಕಿಸಲಾಗಿದೆ. ಆದರೆ ಕರ್ನಾಟಕಕ್ಕೆ ಖಾಲಿ ಚೊಂಬು ನೀಡದೇ, ತುಂಬಿದ ಚೊಂಬನ್ನೇ ನೀಡಲಾಗಿದೆ. ನಮ್ಮ ಬಜೆಟ್ ತುಂಬಿದ ಕೊಡ. ಪ್ರಮುಖ ದಿನಪತ್ರಿಕೆಗಳ ಸಂಪಾದಕೀಯಗಳಲ್ಲಿ ಹಾಗೂ ಆರ್ಥಿಕ ತಜ್ಞರು, ಎಲ್ಲ ಸಮುದಾಯಗಳನ್ನು ತಲುಪಿದ ಬಜೆಟ್, ರಾಜ್ಯದ ಸುಸ್ಥಿರ ಮತ್ತು ಸಶಕ್ತ 11 ಜಿ ಮಾದರಿಯ ಬಜೆಟ್,ನೀರಾವರಿ ಮತ್ತು ಮೂಲಸೌಕರ್ಯಕ್ಕೆ ಒತ್ತು, ಜನಪ್ರಿಯತೆ ಮತ್ತು ವಾಸ್ತವದ ಬಜೆಟ್ , ರಾಜ್ಯದ ಬೊಕ್ಕಸವನ್ನು ಸುಸ್ಥಿರವಾಗಿಡುವ ದೂರದೃಷ್ಟಿಯ ಬಜೆಟ್, ನಿರುದ್ಯೋಗ ನಿವಾರಣೆ, ಸಾಮಾಜಿಕ ಭದ್ರತೆ, ಶಿಕ್ಷಣ, ಆರೋಗ್ಯ, ಮೂಲಸೌಕರ್ಯದ ಮೇಲೆ ಕೇಂದ್ರಿತ ಹಾಗೂ ಎಲ್ಲರನ್ನೊಳಗೊಂಡ ಬಜೆಟ್, ಹೂಡಿಕೆಗಳಿಗೆ ಹಾಗೂ ನವೋದ್ಯಮಿಗಳಿಗೆ ನೆರವಾಗುವ ಯೋಜನೆಗಳ ಬಜೆಟ್ ಎಂಬ ಸಕಾರಾತ್ಮಕ ಪ್ರತಿಕ್ರಿಯೆಗಳು ಬಂದಿವೆ ಎಂದು ಅವರು ಹೇಳಿದ್ದಾರೆ.
ಬಜೆಟ್ ಮೇಲೆ ಹೆಚ್ಚು ಜನ ಶಾಸಕರು ಮಾತನಾಡಿದ್ದಾರೆ’



