ಭೋಪಾಲ್: ಯುವ ಕ್ರೀಡಾಪಟುಗಳ ಪ್ರದರ್ಶನಕ್ಕೆ ವೇದಿಕೆಯೊದಗಿಸುವ ಖೇಲೊ ಇಂಡಿಯಾ ಯೂತ್ ಗೇಮ್ಸ್‌ಗೆ ಸೋಮವಾರ ಇಲ್ಲಿ ವರ್ಣರಂಜಿತ ಚಾಲನೆ ಲಭಿಸಿತು.
ಭೋಪಾಲ್‌ನ ತಾತ್ಯಾ ಟೋಪೆ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಕ್ರೀಡಾಕೂಟ ಆರಂಭವಾಗಿದೆ ಎಂದು ಘೋಷಿಸಿದರು.
‘ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ಖೇಲೊ ಇಂಡಿಯಾ ಕೂಟವು ಐತಿಹಾಸಿಕ ಎನಿಸಲಿದೆ’ ಎಂದು ಅವರು ತಿಳಿಸಿದರು. ಕಲಾವಿದರು ಹಾಡು, ನೃತ್ಯ ಪ್ರದರ್ಶನದ ಮೂಲಕ ಸಮಾರಂಭದ ಕಳೆ ಹೆಚ್ಚಿಸಿದರು.
13 ದಿನ ನಡೆಯುವ ಕೂಟದಲ್ಲಿ ಒಟ್ಟು 27 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು, ವಿವಿಧ ರಾಜ್ಯಗಳ 6 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ.
ಕಯಾಕಿಂಗ್, ಕೆನೋಯಿಂಗ್, ಕೆನೋಯಿ ಸ್ಲಲೊಮ್ ಮತ್ತು ಫೆನ್ಸಿಂಗ್ ಕ್ರೀಡೆಗಳನ್ನು ಇದೇ ಮೊದಲ ಬಾರಿಗೆ ಈ ಕೂಟದಲ್ಲಿ ಸೇರಿಸಲಾಗಿದೆ.
ಮಧ್ಯಪ್ರದೇಶದ ಎಂಟು ನಗರಗಳಾದ ಭೋಪಾಲ್, ಇಂದೋರ್, ಉಜ್ಜಯಿನಿ, ಗ್ವಾಲಿಯರ್, ಜಬಲ್ಪುರ, ಮಂಡ್ಲಾ, ಬಾಲಾಘಾಟ್ ಮತ್ತು ಖರಗೋನ್‌ನಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿವೆ.
ಸುಮಾರು 1,400 ಅಧಿಕಾರಿಗಳು ಹಾಗೂ 2 ಸಾವಿರ ಸ್ವಯಂಸ್ವೇವಕರು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.
ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮತ್ತು ಮಧ್ಯಪ್ರದೇಶ ಕ್ರೀಡಾ ಸಚಿವರಾದ ಯಶೋಧರಾ ರಾಜೇ ಸಿಂಧಿಯಾ ಅವರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡರು.
Leave a Review