ಮಾಗಡಿ: ಪಟ್ಟಣದ ಬೈಚಾಪುರ ರಸ್ತೆಯ ಬಳಿಯಲ್ಲಿ ರೇಷ್ಮೆ ಇಲಾಖೆಗೆ ಸೇರಿರುವ ಸುಮಾರು ಒಂಬತ್ತು ಎಕರೆ ಜಾಗವಿದ್ದು ಈ ಜಾಗದಲ್ಲಿ ಪ್ರಸ್ತುತ ಸರಕಾರಿ ಆಸ್ಪತ್ರೆ ಮತ್ತು ತಾಯಿಮಗು ಆಸ್ಪತ್ರೆ ನಿರ್ಮಿಸಲು ಚಿಂತನೆ ನಡೆಸಲಾಗಿದೆ ಎಂದು ಶಾಸಕರಾದ ಹೆಚ್.ಸಿ.ಬಾಲಕೃಷ್ಣ ಹೇಳಿದರು.
ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಾಮಾನ್ಯ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಾಕಷ್ಟು ವರ್ಷಗಳಿಂದ ಮಾಗಡಿಯಲ್ಲಿ ತಾಯಿ ಮಗು ಆಸ್ಪತ್ರೆ ಬೇಕು ಎಂಬ ಕೂಗು ಕೇಳಿ ಬರುತ್ತಿದ್ದು ಇದನ್ನು ನಿರ್ಮಿಸಲು ಒಂದು ತಿಂಗಳಿಗೆ ನೂರು ಹೆರಿಗೆಯಾಗಬೇಕೆಂಬ ನಿಯಮಾಳಿಗಳಿವೆ.ಜೊತೆಗೆ ಇಲಾಖೆಯ ಉನ್ನತಮಟ್ಟದ ಅಧಿಕಾರಿಗಳು ಸುಮಾರು ಆರು ಎಕರೆ ಜಾಗದ ಅವಶ್ಯಕತೆ ಇದೆ ಎಂದಿದ್ದಾರೆ.
ಇದಕ್ಕೆ ಪುಷ್ಠಿ ನೀಡುವಂತೆ ರೇಷ್ಮೆ ಇಲಾಖೆಯ ಜಾಗವಿದ್ದು ಇಲ್ಲಿ ತಾಯಿಮಗು ಆಸ್ಪತ್ರೆಯನ್ನು ನಿರ್ಮಿಸಲಾಗುವುದು.ರೇಷ್ಮೆ ಇಲಾಖೆಯವರಿಗೆ ಬೇರೆಡೆ ಹದಿನೈದು ಎಕರೆ ಜಾಗವನ್ನು ನೀಡಲಾಗುವುದು.ಪ್ರಸ್ತುತ ಸರಕಾರಿ ಆಸ್ಪತ್ರೆ ಜಾಗವನ್ನು ಇತರೆ ಕಚೇರಿ ಮತ್ತು ಕಮರ್ಷಿಯಲ್ ಉದ್ದೇಶಕ್ಕೆ ಉಪಯೋಗವಾಗಲಿದೆ.ಇದನ್ನು ಸರ್ವೆ ಮಾಡಲು ಸರ್ವೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಮಾಗಡಿ ಸರಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಎಕ್ಸರೇ ಹೊರಗಡೆ ಪರಿಶೀಲನೆಗೆ ಬರೆಯುತ್ತಾರೆ ಜೊತೆಗೆ ಗಂಭೀರ ಖಾಯಿಲೆ ಹೆರಿಗೆಗಳಿಗೆ ಬೆಂಗಳೂರಿಗೆ ಕಳುಹಿಸುತ್ತಾರೆ ಎಂಬ ದೂರು ಕೇಳಿ ಬರುತ್ತಿದ್ದು ಇದು ಸಮಂಜಸವಲ್ಲ.ಜನರು ಸರಕಾರಿ ಆಸ್ಪತ್ರೆಗೆ ಬರುವುದು ಉಚಿತ ಚಿಕಿತ್ಸೆಗೆ ಇಲ್ಲಿ ಬರುವವರು ಬಡವರೇ ಆಗಿರುತ್ತಾರೆ.ಇಲ್ಲಸಲ್ಲದ ಸಬೂಬು ಹೇಳಿ ಹೊರಗಡೆ ಮತ್ತು ಬೆಂಗಳೂರಿಗೆ ಕಳುಹಿಸುವುದು ಖಂಡನೀಯ.ಯಾವ ಖಾಯಿಲೆಯ ಯಾವ ರೋಗಿಯನ್ನು ಹೊರಗಡೆ ಕಳುಹಿಸುತ್ತಿದ್ದೇವೆ ಎಂದು ಆಸ್ಪತ್ರೆಯ ಪುಸ್ತಕದಲ್ಲಿ ಷರಾ ದಾಖಲಿಸಬೇಕು.ಈ ಹಿಂದೆ ಆಡಳಿತ ವ್ಯವಸ್ಥೆ ಹೇಗಿತ್ತೊ ಗೊತ್ತಿಲ್ಲ.ಆದರೆ ನನ್ನ ಅಧಿಕಾರಾವಧಿಯಲ್ಲಿ ಶ್ರೀ ಸಾಮಾನ್ಯರಿಗೆ,ಬಡವರಿಗೆ ಮುಕ್ತವಾದ ಆರೋಗ್ಯ ಸೇವೆ ದೊರಕಬೇಕು ಎಂದು ಬಾಲಕೃಷ್ಣ ತಿಳಿಸಿದರು.
ಸಾಕಷ್ಟು ತಿಂಗಳುಗಳಿಂದ ಯುಜಿಡಿ ಸಮಸ್ಯೆಯಿಂದ ಆಸ್ಪತ್ರೆ ಸುತ್ತಮುತ್ತ ದುರ್ವಾಸನೆ ಬರುತ್ತಿದ್ದು ಇದನ್ನು ಒಂದು ವಾರದಲ್ಲಿ ಸರಿಪಡಿಸಲು ಪುರಸಭೆ ಎಂಜಿನಿಯರ್ ಪ್ರಶಾಂತ್ ಯುಜಿಡಿ ಎಂಜಿನಿಯರ್ ಅವರಿಗೆ ಶಾಸಕರು ಸೂಚಿಸಿದರು.ಸಾರ್ವಜನಿಕರ ಸ್ಥಳವಾಗಿರುವುದರಿಂದ ಸಮಸ್ಯೆಗಳು ಸರ್ವೇ ಸಾಮಾನ್ಯ.ಇದನ್ನು ಬಗೆಹರಿಸಲು ಎರಡು ತಿಂಗಳಿಗೊಮ್ಮೆ ಸಭೆ ಕರೆದು ಸಮಸ್ಯೆ ಬಗೆಹರಿಸಲಾಗುವುದು.ಗುತ್ತಿಗೆ ಆಧಾರದ ಮೇಲೆ ಹದಿನೈದು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳು ಖಾಯಂಗೊಳಿಸುವಂತೆ ಮನವಿ ಸಲ್ಲಿಸಿದರು.ಇದಕ್ಕೆ ಸ್ಪಂದಿಸಿದ ಶಾಸಕರು ಮುಂದಿನ ವಿಧಾನಸಭಾ ಕಲಾಪದಲ್ಲಿ ನಿಮ್ಮ ಸಮಸ್ಯೆ ಕುರಿತು ಧ್ವನಿ ಎತ್ತುವುದಾಗಿ ತಿಳಿಸಿದರು.
ತಾಪಂ ಇಒ ಚಂದ್ರು, ಟಿ.ಎಚ್.ಒ.ಚಂದ್ರಶೇಖರ್, ಮಾಗಡಿ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಜ್ಞಾನಪ್ರಕಾಶ್, ಪುರಸಭೆ ಮುಖ್ಯಾಧಿಕಾರಿ ಶಿವರುದ್ರಯ್ಯ, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಮಣಿಗನಹಳ್ಳಿ ಸುರೇಶ್, ಮುಖಂಡರಾದ ತೇಜು, ಕೆಂಪೇಗೌಡ,ಅಬ್ದುಲ್ ರೆಹಮಾನ್, ಆಬೀದ್, ಪಾಪಣ್ಣಗೌಡ,ಬಿಬಿಜೆ ಶ್ರೀನಿವಾಸ್ ಸೇರಿದಂತೆ ಮತ್ತಿತರಿದ್ದರು.