ಖ್ಯಾತ ನೃತ್ಯಗುರು ರೂಪಶ್ರೀ ಮಧುಸೂದನ್ ಅವರ ಬದ್ಧತೆಯ ನೃತ್ಯ ಗರಡಿಯಲ್ಲಿ ರೂಪುಗೊಂಡ ನೃತ್ಯಶಿಲ್ಪ ವಿದುಷಿ ದಿವ್ಯಶ್ರೀ ಎಸ್. ವಟಿ ಉತ್ತಮ ಕಲಾವಿದೆ. ನಾಡಿನಾದ್ಯಂತ ಅನೇಕ ಕಾರ್ಯಕ್ರಮಗಳನ್ನು ನೀಡಿ, ಪ್ರಶಸ್ತಿಗಳನ್ನು ಪಡೆದು ಕಲಾರಸಿಕರ ಮೆಚ್ಚುಗೆ ಗಳಿಸಿರುವ ದಿವ್ಯಶೀ ಬೆಂಗಳೂರಿನ `ನೃತ್ಯೋದಯ ಅಕಾಡೆಮಿ’ ನಾಟ್ಯಸಂಸ್ಥೆಯಲ್ಲಿ ನೂರಾರು ಶಿಷ್ಯರಿಗೆ ತರಬೇತಿ ನೀಡುತ್ತಿರುವ ಉತ್ತಮ ಗುರು ಕೂಡ.
ಅವರ ಶಿಷ್ಯೆ ಹಾಗೂ ಮಗಳಾದ ಎಂಟುವರ್ಷದ ಪುಟಾಣಿ ಕು. ಯು.ಬಿ.ನೃತ್ಯಳಿಗೆ ತಾಯಿಯೇ ಗುರುವಾಗಿ ಕಲಾಪೋಷಣೆ ಮಾಡುತ್ತಿರುವುದು ವಿಶೇಷ ಸಂಗತಿ. ಡಿಸೆಂಬರ್ 3 ಭಾನುವಾರ ಬೆಳಗ್ಗೆ 9.30 ಕ್ಕೆ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ತಾಯಿ-ಮಗಳು `ಕೃಷ್ಣಾರ್ಪಣಂ’ -ಯುಗಳ ನೃತ್ಯವನ್ನು ಪ್ರಸ್ತುತಪಡಿಸುತ್ತಿರುವುದು ಒಂದು ಅಪರೂಪದ ಸಂದರ್ಭ. ಇವರೀರ್ವರ ಸುಮನೋಹರ ನೃತ್ಯವೈಭವವನ್ನು ಕಣ್ತುಂಬಿಕೊಳ್ಳಲು ಎಲ್ಲರಿಗೂ ಆದರದ ಸ್ವಾಗತ.
ಬೇಲೂರಿನ ಡಾ. ಶ್ರೀವತ್ಸ ವಟಿ ಮತ್ತು ನವರತ್ನ ಅವರ ಪುತ್ರಿ ದಿವ್ಯಶ್ರೀಗೆ ನೃತ್ಯ ಬಾಲ್ಯದ ಒಲವು. ಎಂಟರ ಎಳವೆಯಲ್ಲೇ ಬೇಲೂರಿನಲ್ಲಿ ಭರತನಾಟ್ಯ ಕಲಿಯಲು ಆರಂಭಿಸಿದ ದಿವ್ಯಶ್ರೀಗೆ ಮೊದಲಗುರು ರಾಜೇಶ್ವರಿ ವಸಂತ್, ಅನಂತರ ಗುರುವಾದವರು ಶೈಲಜಾ ಶೆಟ್ಟಿ. ಮುಂದೆ ಬೆಂಗಳೂರಿನಲ್ಲಿ ವಿದುಷಿ ರೂಪಶ್ರೀ ಮಧುಸೂದನ್ ಅವರಲ್ಲಿ ಅತ್ಯಾಸಕ್ತಿಯಿಂದ ಸುಮಾರು ದಶಕಗಟ್ಟಲೆ ಕಾಲ ನೃತ್ಯ ತರಬೇತಿ ಪಡೆದು, ಕರ್ನಾಟಕ ಸರ್ಕಾರ ನಡೆಸುವ ಜ್ಯೂನಿಯರ್, ಸೀನಿಯರ್ ಮತ್ತು ವಿದ್ವತ್ ಪರೀಕ್ಷೆಗಳಲ್ಲಿ `ಡಿಸ್ಟಿಂಕ್ಷನ್’ ಗಳಿಸಿ ನಾಡಿನಾದ್ಯಂತ ಅನೇಕ ನೃತ್ಯೋತ್ಸವಗಳಲ್ಲಿ, ಎಲ್ಲ ಪ್ರಮುಖ ದೇವಾಲಯಗಳಲ್ಲಿ ನೃತ್ಯ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದ ವೈಶಿಷ್ಟ್ಯ ಅವರದು.
ಕುವೆಂಪು ಯೂನಿವರ್ಸಿಟಿಯಿಂದ ಎಂ.ಬಿ.ಎ. ಪದವೀಧರೆಯಾದ ದಿವ್ಯಶ್ರೀಗೆ ಕ್ರೀಡೆಗಳಲ್ಲೂ ಅತ್ಯಾಸಕ್ತಿ. ವಾಲಿಬಾಲ್ ಕ್ರೀಡೆಯಲ್ಲಿ ಯೂನಿವರ್ಸಿಟಿಯನ್ನು ಪ್ರತಿನಿಧಿಸಿದ ಹೆಮ್ಮೆ ಅವರದು. ಒಟ್ಟು 23 ವರ್ಷಗಳ ಕಾಲ ನೃತ್ಯ ತರಬೇತಿ ಹೊಂದಿದ್ದು, ಸಾಧನಾ ಪಥದಲ್ಲಿ ಸಾಗುತ್ತಿರುವ ದಿವ್ಯಶ್ರೀ ಅವರಿಗೆ ಅನೇಕ ಪ್ರಶಸ್ತಿಗಳು ಲಭ್ಯವಾಗಿವೆ. ಅವುಗಳಲ್ಲಿ ಪ್ರಮುಖವಾದವು- ಮೈಸೂರಿನ ಮಹಾರಾಜ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರಿಂದ `ನಾಟ್ಯ ಸರಸ್ವತಿ’ ಬಿರುದು , ಕರ್ನಾಟಕ ಪ್ರತಿಭಾವರ್ಧಕ ಅಕಾಡೆಮಿಯಿಂದ `ನಾಟ್ಯ ಮಯೂರಿ’ಯಲ್ಲದೆ, ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿ, ಏಷ್ಯನ್ ಎಜ್ಯುಕೇಶನ್ ಅವಾರ್ಡ್ ಮುಂತಾದವು.
ದಿವ್ಯಶ್ರೀ ತಮ್ಮದೇ ಅದ `ನೃತ್ಯೋದಯ ಅಕಾಡೆಮಿ’ಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿ ಹತ್ತುವರ್ಷಗಳಾಗಿ ಡಿಸೆಂಬರ್ 3 ರಂದು ಸಂಜೆ 5 ಗಂಟೆಗೆ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ಸಂಸ್ಥೆಯ ದಶಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.ಸುಮಾರು ಇನ್ನೂರಕ್ಕೂ ಮೇಲ್ಪಟ್ಟ ನೃತ್ಯಾಕಾಂಕ್ಷಿಗಳಿಗೆ ಸಮರ್ಥವಾಗಿ ನೃತ್ಯಶಿಕ್ಷಣ ನೀಡುತ್ತ ಬಂದಿರುವ ಇವರು ಅಂತರ್ಜಾಲದಲ್ಲೂ ಶಿಕ್ಷಣ ನೀಡುತ್ತಿದ್ದು, ಅನೇಕ ಕಾರ್ಯಾಗಾರಗಳಲ್ಲಿ ಭಾಗವಹಿಸಿ ನೃತ್ಯದ ಆಯಾಮಗಳಲ್ಲಿ ಸಾಕಷ್ಟು ಅನುಭವ ಪಡೆದಿರುವರು. ಇವರೆಲ್ಲ ನೃತ್ಯ ಚಟುವಟಿಕೆಗಳಿಗೆ ತುಂಬು ಪ್ರೋತ್ಸಾಹ ನೀಡುತ್ತಿರುವ ಇವರ ಪತಿ ಯು.ಆರ್. ಉದಯ್, ತಮ್ಮ ಮಗಳು `ನೃತ್ಯ’ಳನ್ನೂ ಉತ್ತಮ ನೃತ್ಯ ಕಲಾವಿದೆಯನ್ನಾಗಿಸುವ ಆಶಯವನ್ನು ಹೊಂದಿದ್ದಾರೆ.
ವಿಶ್ವ ವಿದ್ಯಾಪೀಠದಲ್ಲಿ ಎರಡನೆಯ ತರಗತಿಯಲ್ಲಿ ಓದುತ್ತಿರುವ ನೃತ್ಯಳಿಗೆ ತಾಯಿಯ ಬಳಿಯೇ ಶಿಕ್ಷಣ ನಡೆಯುತ್ತಿದ್ದು, ಈ ಬಾಲಕಿ ಈಗಾಗಲೇ ಅನೇಕ ದೇವಾಲಯಗಳಲ್ಲಿ ನರ್ತಿಸಿದ್ದಾಳೆ. ಪ್ರಸ್ತುತ, ತಾಯಿ-ಮಗಳು ಈಗ ಒಟ್ಟಿಗೆ `ಕೃಷ್ಣಾರ್ಪಣಂ’ ನೃತ್ಯ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದು, ನೋಡುಗರ ಕಣ್ಣಿಗೆ ಕಣ್ಮನಾನಂದವನ್ನು ನೀಡಲಿದ್ದಾರೆ.
ವೈ.ಕೆ.ಸಂಧ್ಯಾ ಶರ್ಮ