ಬಂಗಾರಪೇಟೆ: ಕಾಂಗ್ರೆಸ್ ಪಕ್ಷದಿಂದ ರಾಜಕೀಯ ಭವಿಷ್ಯವನ್ನು ಕಂಡುಕೊಂಡ ಸಂಸದ ಎಸ್.ಮುನಿಸ್ವಾಮಿ ಅವರು ಗ್ರಾಮ ಪಂಚಾಯಿತಿ ಸದಸ್ಯರಾಗಿ ಹಾಗೂ ಕಾಂಗ್ರೆಸ್ ಎಸ್ಸಿ ವಿಭಾಗದ ಕೆಪಿಸಿಸಿ ಸದಸ್ಯರಾಗಿ ಆಯ್ಕೆಯಾಗಿದ್ದರು. ಬದಲಾದ ರಾಜಕಾರಣದಲ್ಲಿ ಬಿಜೆಪಿ ಪಕ್ಷಕ್ಕೆ ಸೇರಿ ಸಂಸದರಾದ ನೀವು ಇಂದು ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲವೆಂದು ರಾಜ್ಯ ಕಾಂಗ್ರೆಸ್ ವಕ್ತಾರ ಸ್ಟ್ಯಾಂಡ್ಲಿ ಗುಡಿಗಿದರು.
ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ಎಸ್.ಮುನಿಸ್ವಾಮಿ ಅವರು ತನ್ನ 5ವರ್ಷದ ಅವಧಿಯಲ್ಲಿ ಕೇವಲ 27ನಿಮಿಷ ಮಾತನಾಡಿರುತ್ತಾರೆ. ಇದರಲ್ಲಿ ಇದುವರೆಗೂ ಜಿಲ್ಲೆಯ ಯಾವುದೇ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರಸ್ತಾಪವಾಗಿರುವುದಿಲ್ಲ. ಸಂಸದರಿಗೆ ಪ್ರಶ್ನೋತ್ತರ ವೇಳೆ ಮತ್ತು ಶೂನ್ಯ ವೇಳೆಯ ಬಗ್ಗೆ ಅರಿವಿಲ್ಲ, ಬಜೆಟ್ ಮೇಲೆ ಚರ್ಚೆಯ ಸಮಯದಲ್ಲಿ ಅನಗತ್ಯವಾಗಿ ಚರ್ಚೆಮಾಡುವುದರ ಮೂಲಕ ಸಮಯ ವ್ಯರ್ಥ ಮಾಡಿದ್ದಾರೆ.
ಇದಕ್ಕೆ ಸಂಬಂಧಪಟ್ಟಂತೆ ಸಭಾಧ್ಯಕ್ಷರು ಇದು ಪ್ರಶ್ನೋತ್ತರ ವೇಳೆ ಎಂದು ತಿಳಿಸಿದರೂ ಸಹ ಸಂಸದರು ಭಾಷಣ ಮಾಡಲು ಮುಂದಾಗಿ ನಗೆಬಾಟಲಿಗೀಡಾಗಿದ್ದಾರೆ. ಕೆ.ಎಚ್.ಮುನಿಯಪ್ಪ ಅವರ ಸಾಧನೆಯನ್ನು ನಮ್ಮ ಸಾಧನೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ.
ಕೆಜಿಎಫ್ನ ವಿಶ್ವಪ್ರಸಿದ್ದ ಚಿನ್ನದಗಣಿಯನ್ನು ಪುನರಾರಂಭ ಮಾಡದೇ ಅಲ್ಲಿನ ಜನತೆ ಭಾವನೆಗಳ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ. ಇದುವರೆಗೂ ಜಿಲ್ಲೆಯಲ್ಲಿ ಯಾವುದೇ ರೈಲ್ವೆ ಇಲಾಖೆಯ ಅಭಿವೃದ್ದಿ ಕೆಲಸ ನಡೆದಿಲ್ಲ.
ಶ್ರೀನಿವಾಸಪುರ ರೈಲ್ವೆ ಪ್ರಾಜೆಕ್ಟ್, ಮಾರಿಕುಪ್ಪಂ ದ್ವಿಪಥ ಟ್ರಾಕ್, ಬಂಗಾರಪೇಟೆ ರೈಲ್ವೆ ಮೇಲ್ಸೇತುವೆ, ಬಿಇಎಂಎಲ್ ಖಾಸಗೀಕರಣದ ಬಗ್ಗೆ ಸ್ಪಷ್ಟತೆ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಯೊಬ್ಬ ಸಂಸದರು 5ಗ್ರಾಮಗಳನ್ನು ದತ್ತು ಪಡೆದುಕೊಂಡು ಮಾದರಿ ಗ್ರಾಮಗಳಾಗಿ ಮಾಡಲು ಸೂಚಿಸಿದರು. ಆಗಾದರೆ ನೀವು ಆಯ್ಕೆ ಮಾಡಿಕೊಂಡ ಗ್ರಾಮಗಳು ಯಾವುದು ಎಂಬುದನ್ನು ಸ್ಪಷ್ಟಪಡಿಸಿ, ಕೇಂದ್ರ ಸರ್ಕಾರದ ಅವಧಿಯಲ್ಲಿ ಬರುವ ಏಕಲವ್ಯ ಶಾಲೆಗಳ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ ಇದನ್ನು ಅಭಿವೃದ್ಧಿಪಡಿಸಲು ವಿಫಲರಾಗಿದ್ದಾರೆ.
ಧರ್ಮ ರಾಜಕಾರಣಕ್ಕೆ ಮುಕ್ತಿ ಸಿಗಲಿದೆ: ಸಂಸದ ಎಸ್.ಮುನಿಸ್ವಾಮಿ ಅವರು ಒಂದು ಧರ್ಮದ ಸಂಕೇತವಾಗಿರುವ ಹಸಿರು ಬಣ್ಣ ಹೊಂದಿರುವ ಕ್ಲಾಕ್ ಟವರ್ಗೆ ತ್ರಿವರ್ಣಧ್ವಜದ ಬಣ್ಣ ಹಾಕಿ ಕೋಮುಗಲಬೆ ಸೃಷ್ಠಿಸಲು ಯತ್ನಿಸಿದರು. ಹಾಗೂ ರಾಮ ಮಂದಿರ ವಿಚಾರದಲ್ಲಿ ಪದೇ ಪದೇ ಪ್ರಚೋದನಾತ್ಮಕ ಹೇಳಿಕೆ ನೀಡುವುದೇ ಕಾಯಕವನ್ನಾಗಿಸಿಕೊಂಡಿದ್ದರು. ಇದಕ್ಕೆ ಕ್ಷೇತ್ರದ ಜನತೆ ತಕ್ಕ ಉತ್ತರ ನೀಡಲಿದ್ದಾರೆ. ಈ ಸಂದರ್ಭದಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದು, ಪಾರ್ಥಸಾರಥಿ, ಮುಖಂಡರಾದ ಮಹದೇವಪ್ಪ, ಸುಹೇಲ್, ಶ್ರೀನಿವಾಸ್, ರಘುನಾಥ್, ರಫಿಕ್ ಇನ್ನಿತರರು ಇದ್ದರು.