ಕೋಲಾರ: ಜಿಲ್ಲೆಗೆ ಕಾಂಗ್ರೆಸ್ ಅಭ್ಯರ್ಥಿಪರ ರಾಹುಲ್ ಗಾಂಧಿ, ಅವರ ತಾತ, ಅವರ ಅಜ್ಜಿ, ಅವರ ಅಮ್ಮ ಬಂದರೂ, ಹೆದರಲ್ಲ, ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ನರೇಂದ್ರ ಮೋದಿಯ ಜನಪ್ರಿಯತೆ, ಅಭಿವೃದ್ದಿ ಕೆಲಸಗಳಿಂದ ಎನ್ಡಿಎ ಅಭ್ಯರ್ಥಿ ಗೆಲುವು ಖಚಿತವಾಗಿದೆ ಎಂದು ಸಂಸದ ಎಸ್.ಮುನಿಸ್ವಾಮಿ ಘೋಷಿಸಿದರು.
ಕೋಲಾರ ಜಿಲ್ಲೆಗೆ ರಾಹುಲ್ ಗಾಂಧಿ ಪ್ರಚಾರಕ್ಕೆ ಬರುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಹುಲ್ ಬಂದರೆಂದರೆ ಕಾಂಗ್ರೆಸ್ ಸೋಲು ಖಚಿತ ಎಂದರ್ಥ, ಇದಕ್ಕೆ ಉತ್ತರ ಭಾರತದ ರಾಜ್ಯಗಳೇ ಸಾಕ್ಷಿಯಾಗಿದೆ, ಅವರು ಇಲ್ಲೇ ಒಂದು ಮೊಕ್ಕಾಂ ಹೂಡಿದರೂ ಎನ್ಡಿಎ ಅಭ್ಯರ್ಥಿ ಮಲ್ಲೇಶಬಾಬು ಗೆಲುವನ್ನು ತಡೆಯಲು ಸಾಧ್ಯವಿಲ್ಲ ಎಂದರು.
ದೇಶಕ್ಕೆ ನರೇಂದ್ರ ಮೋದಿ ಬೇಕೆಂದು ದೇವೇಗೌಡರು ತೀರ್ಮಾನ ಮಾಡಿದ್ದಾರೆ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಹಾಲಿನಲ್ಲಿ ಜೇನು ತುಪ್ಪ ಸೇರಿದಂತೆ ಆಗಿದೆ, ಈ ಹಿಂದೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಹಾಲಿನಲ್ಲಿ ಹುಳಿ ಹಿಡಿದಂತೆ ಇತ್ತು, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿ ಎಷ್ಟು ಚಿತ್ರಹಿಂಸೆ ಕೊಟ್ಟು ಅವರನ್ನು ಇಳಿಸಿದ್ದಾರೆ ಅಂತಾ ಜನರಿಗೆ ಗೊತ್ತಿದೆ ಎಂದರು.
ಕೈಗಾರಿಕಾ ಸಚಿವ ಶರಣಬಸಪ್ಪ ಹೇಳಿಕೆಗೆ ಸಂಸದ ಎಸ್.ಮುನಿಸ್ವಾಮಿ ಪ್ರತಿಕ್ರಿಯೆ ನೀಡಿ, ಈ ಬಾರಿ ಚುನಾವಣೆಯಲ್ಲಿ ಲೀಡ್ ಕೊಡಲಿಲ್ಲ ಅಂದರೆ ಸಚಿವ ಸ್ಥಾನದಿಂದ ತೆಗೆಯಲಾಗುವುದು ಎಂಬ ಹೇಳಿಕೆಯನ್ನು ಈಗಾಗಲೇ ಸಿದ್ದರಾಮಯ್ಯ ವರುಣ ಕ್ಷೇತ್ರದಲ್ಲಿ ಹೇಳಿದ್ದಾರೆ ಎಂದರು.ಈ ಹಿನ್ನಲೆಯಲ್ಲಿ ಲೀಡ್ ಬಂದಿಲ್ಲ ಎಂದರೆ ಸಿಎಂ ಸ್ಥಾನದಿಂದ ವಾಪಸ್ ಪಡೆಯುತ್ತಾರೆ ಎಂಬ ಹೇಳಿಕೆ ಬಂದಿದೆ ಎಂದು ತಿಳಿಸಿ, ಡಿಕೆಶಿ ಅವರು ಪೆನ್ನು ಪೇಪರ್ ಕೊಡಿ ಸಿಎಂ ಆಗುತ್ತಿನಿ ಎಂದಿದ್ದಾರೆ. ಅವರಿಗೆ ಲೋಡ್ ಲೋಡ್ ಪೆನ್ನು ಪೇಪರ್ ಕೊಟ್ಟರು ಸಿಎಂ ಆಗುವ ಲಕ್ಷಣಗಳು ಕಾಣಿಸ್ತಿಲ್ಲ ಎಂದು ವ್ಯಂಗ್ಯವಾಡಿದರು.
ಮಹಿಳೆಯರ ಬಗ್ಗೆ ಗೌರವ ಇರುವುದರಿಂದಲೇ ತೆನೆ ಹೊತ್ತ ಜೆಡಿಎಸ್ಗೆ ಮಹಿಳೆ ಚಿಹ್ನೆ ಇರಿಸಿಕೊಂಡಿದ್ದಾರೆ ಇಂತಹ ಸಂದರ್ಭದಲ್ಲಿ ಕುಮಾರಸ್ವಾಮಿ ಅವರಿಗೆ ಡಿಕೆಶಿ ಹಾಗೂ ಸಿದ್ದರಾಮಯ್ಯರ ಸರ್ಟಿಫಿಕೇಟ್ ಬೇಕಾಗಿಲ್ಲ ಎಂದರು.ದ್ರೌಪತಿ ಮುರ್ಮು, ಕಂಗಾನಾ, ಹೇಮಮಾಲಿನಿ ಕುರಿತು ಕಾಂಗ್ರೆಸ್ಸಿಗರು ಮಾತನಾಡಿದ್ದಾರೆ, ಮಾಜಿ ಸ್ಪೀಕರ್ ರಮೇಶ್ ಕುಮಾರಗ ವಿಧಾನ ಸೌಧದಲ್ಲಿ ಅವಹೇಳನಕಾರಿಯಾಗಿ ಮಾತನಾಡಿದಾಗಲೂ ಡಿಕೆಶಿಗೆ ಮಹಿಳೆಯರಿಗೆ ಗೌರವ ನೀಡಬೇಕು ಎನಿಸಲಿಲ್ಲವೇ ಎಂದು ಪ್ರಶ್ನಿಸಿದರು.
ಸಾಧನೆಗಳನ್ನ ಹೇಳಿ ಚುನಾವಣೆಗೆ ಹೋಗಬೇಕು ಆದರೆ ಕೀಳುಮಟ್ಟದ ರಾಜಕೀಯ ಮಾಡಿ ಚುನಾವಣೆ ನಡೆಸಲು ಮುಂದಾಗಿದ್ದಾರೆ, ಇದು ಕಾಂಗ್ರೆಸ್ಸಿಗರಿಗೆ ನಾಚಿಕೆಯಾಗಬೇಕು ಎಂದರು. ಡಿಕೆಶಿ ಸಿದ್ದರಾಮಯ್ಯ ಅವರಿಗೆ ಕೋಲಾರಮ್ಮ ಒಳ್ಳೆಯ ಬುದ್ದಿ ಕೊಡಲಿ ಎಂದರು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪಿ.ಎಂ.ಕೃಷ್ಣಮೂರ್ತಿ,ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಹನುಮಂತಪ್ಪ,ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಆರ್.ಬಾಲಾಜಿ,ಚಲಪತಿ ವಕೀಲರು, ಸ್ನೇಹಿತರಾದ ಶಿವಮೂರ್ತಿ,ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಮಂಜುನಾಥ್, ರಮೇಶ್ ಮತ್ತಿತರರಿದ್ದರು.