ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸ್ ತನಿಖಾ ವರದಿ ಸಲ್ಲಿಕೆಯನ್ನು ಕರ್ನಾಟಕ ಹೈಕೋರ್ಟ್ ಗುರುವಾರ ಮುಂದೂಡಿದೆ.
ಸಿಎಂ ಸಿದ್ದರಾಮಯ್ಯ ವಿರುದ್ಧದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನ ಹೈಕೋರ್ಟ್ ಜನವರಿ 15ಕ್ಕೆ ಮುಂದೂಡಿಕೆ ಮಾಡಿದೆ.
ಹೈಕೋರ್ಟ್ ಏಕ ಸದಸ್ಯ ಪೀಠದಲ್ಲಿ ಇಂದು ಅರ್ಜಿಯ ವಿಚಾರಣೆ ನಡೆಯಿತು. ಬಳಿಕ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನೇತೃತ್ವದ ಪೀಠ ವಿಚಾರಣೆಯನ್ನು 2025 ಜನವರಿ 15ಕ್ಕೆ ಮುಂದೂಡಿದರು.
ಸಿದ್ಧರಾಮಯ್ಯ ಮತ್ತು ಕರ್ನಾಟಕ ಸರ್ಕಾರವನ್ನು ಪ್ರತಿನಿಧಿಸುವ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಮತ್ತು ಕಪಿಲ್ ಸಿಬಲ್ ಅವರು ವರ್ಗಾವಣೆ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವ ಉದ್ದೇಶವನ್ನು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ವಿಚಾರಣೆ ಆರಂಭವಾದ ಬಳಿಕ ಎಲ್ಲಾ ಪ್ರತಿವಾದಿಗಳಿಗೂ ನೋಟಿಸ್ ಜಾರಿಯಾಗಿದೆ ಎಂದು ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲ ಕೆ ಜಿ ರಾಘವನ್ ಅವರು ವಾದ ಮಂಡಿಸಿದರು. ಹೈ ಕೋರ್ಟ್ ಎದುರಿನ ಬಿಲ್ಡಿಂಗ್ ನೋಟಿಸ್ ಜಾರಿಯಾಗಲು 35 ದಿನ ಸಮಯ ತಗುಲಿರುವುದು ಶಾಕಿಂಗ್ ವಿಚಾರ ಎಂದು ಇದೇ ವೇಳೆ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠ ಅಭಿಪ್ರಾಯಿಸಿತು.